ವಿಡಿಯೋ ವೈರಲ್ ಆಗಿ ಬೆಳಕಿಗೆ ಬಂದ ಕೃತ್ಯ
ಮಂಗಳೂರು: ಮೂಡುಬಿದಿರೆ ಸಮೀಪ ಖಾಸಗಿ ಬಸ್ನಲ್ಲಿ ಯುವತಿಗೆ ಕಿರುಕುಳ ನೀಡಿದ್ದ ಅನ್ಯಕೋಮಿನ ವೃದ್ಧನನ್ನು ಶನಿವಾರ ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ. ಬೆಳುವಾಯಿಯ ನಿವಾಸಿ ರೆಹ್ಮಾನ್ ಸೆರೆಯಾಗಿರುವ ಆರೋಪಿ.
ಕೆಲ ದಿನಗಳ ಹಿಂದೆ ಮಂಗಳೂರು-ಮೂಡುಬಿದಿರೆ-ಕಾರ್ಕಳ ಮಧ್ಯೆ ಸಂಚರಿಸುವ ಖಾಸಗಿ ಬಸ್ನಲ್ಲಿ ತನ್ನ ಪಕ್ಕ ಕುಳಿತಿದ್ದ ಯುವತಿಗೆ ಆರೋಪಿ ಮೈಮುಟ್ಟಿ ಕಿರುಕುಳ ನೀಡಿದ್ದ. ಇದನ್ನು ಪ್ರತಿಭಟಿಸಿ ಯುವತಿ ಬಸ್ನಲ್ಲೇ ವೃದ್ಧನನ್ನು ದಬಾಯಿಸಿದ್ದು, ಉಳಿದ ಪ್ರಯಾಣಿಕರೂ ಯುವತಿಯ ಬೆಂಬಲಕ್ಕೆ ನಿಂತಿದ್ದರು.ಯಾರೋ ಇದನ್ನು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾಕ್ಕೆ ಹಾಕಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಅಂದೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಡಿಯೋದ ದೃಶ್ಯಾವಳಿಯನ್ನು ಆಧರಿಸಿ ಆರೋಪಿಯನ್ನು ಪೊಲೀಸರು ಮೂಡುಬಿದಿರೆ ಪೊಲೀಸ್ ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದ್ದರು. ಸಂತ್ರಸ್ತ ಯುವತಿ, ವಿಡಿಯೋ ಚಿತ್ರೀಕರಣ ಮಾಡಿದ ವ್ಯಕ್ತಿ ಅಥವಾ ಇತರರು ದೂರು ನೀಡದ ಕಾರಣ ಆರೋಪಿಗೆ ಎಚ್ಚರಿಕೆ ನೀಡಿ ಬಿಟ್ಟುಕಳುಹಿಸಿದ್ದರು. ಈ ನಡುವೆ ಮೂಡುಬಿದಿರೆ ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ ಆರೋಪಿಯ ವಿರುದ್ಧ ದೂರು ನೀಡುವವರು ಮೂಡುಬಿದಿರೆ ಠಾಣೆಗೆ ಸಂಪರ್ಕಿಸುವಂತೆ ಪ್ರಕಟಣೆ ಹೊರಡಿಸಿದ್ದರು.
ನಿನ್ನೆ ಈ ಕುರಿತು ಕ್ರಮ ಕೈಗೊಳ್ಳುವಂತೆ ಮೂಡುಬಿದಿರೆ ಹಿಂದೂ ಮಹಿಳಾ ಸಂರಕ್ಷಣಾ ವೇದಿಕೆಯ ಪದಾಧಿಕಾರಿಗಳು ಮೂಡುಬಿದಿರೆ ಪೊಲೀಸ್ ವೃತ್ತ ನಿರೀಕ್ಷ ಸಂದೇಶ ಪಿ.ಜಿ ಅವರಿಗೆ ಲಿಖಿತ ಮನವಿ ಸಲ್ಲಿಸಿದ್ದರು. ಕೂಡಲೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
























