ಮತಾಂತರ, ಮತಾಂಧತೆ ಮಾಫಿಯಾದ ಕೈವಾಡ ಇದೆ ಎಂದ ಸಿ.ಟಿ.ರವಿ
ಮಂಗಳೂರು: ಧರ್ಮಸ್ಥಳ ಕ್ಷೇತ್ರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನೇತೃತ್ವದಲ್ಲಿ ಶಾಸಕರ ತಂಡ ಇಂದು ಬೆಳಗ್ಗೆ ಭೇಟಿ ನೀಡಿ ದೇವರ ದರ್ಶನ ಪಡೆದು ಬಳಿಕ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿದೆ. ಎಂಎಲ್‍ಸಿ ಸಿ.ಟಿ ರವಿ ಹಾಗೂ ಶಾಸಕರು ಭೇಟಿ ನೀಡಿ, ದೇವರ ದರ್ಶನ ಪಡೆದಿದ್ದಾರೆ.
ಬಿಜೆಪಿ ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್, ಎಂಎಲ್‌ಸಿ ಸಿ.ಟಿ.ರವಿ ಸಹಿತ ಬಿಜೆಪಿಯ ಹಲವು ಶಾಸಕರು, ಎಂಎಲ್‌ಸಿಗಳು ಮತ್ತು ಪ್ರಮುಖ ನಾಯಕರು ಈ ನಿಯೋಗದಲ್ಲಿದ್ದರು.
ಧರ್ಮಸ್ಥಳದ ವಿರುದ್ಧ ಕೇಳಿಬಂದ ಆರೋಪಗಳ ಬಗ್ಗೆ ತನಿಖೆ ಮಾಡಲು ಎಸ್‌ಐಟಿ ರಚಿಸಿದ್ದನ್ನು ಬಿಜೆಪಿ ಆರಂಭದಲ್ಲೇ ಸ್ವಾಗತಿಸಿದೆ. ತನಿಖೆಯ ಮಧ್ಯಂತರ ವರದಿಯನ್ನು ಸದನದಲ್ಲಿ ಮಂಡಿಸಬೇಕೆಂದು ನಾವು ಒತ್ತಾಯಿಸಿದ್ದೇವೆ. ಆದರೆ ಸರ್ಕಾರ ಇದಕ್ಕೆ ಸ್ಪಂದಿಸಿಲ್ಲ. ಆರೋಪಗಳ ತನಿಖೆಯ ಜೊತೆಗೆ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುವವರ ಬಗ್ಗೆಯೂ ಸಮಗ್ರ ತನಿಖೆಯಾಗಬೇಕು ಎಂದು ವಿಜಯೇಂದ್ರ ಹೇಳಿದರು.
ದೇವರ ದರ್ಶನದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿ.ಟಿ ರವಿ, ಬಿಜೆಪಿ ತನಿಖೆಯನ್ನು ಪ್ರಶ್ನಿಸುವುದಿಲ್ಲ. ತನಿಖೆಗೆ ಮುಂಚೆಯೇ ಅಪರಾಧಿ ಸ್ಥಾನ ಕೊಟ್ಟಿದ್ದಾರೆ. ಈ ಷಡ್ಯಂತ್ರದ ಹಿಂದೆ ಮತಾಂಧತೆ ಇದೆ. ಇದರ ಹಿಂದೆ ಮತಾಂತರ ಮಾಫಿಯಾ ಇದೆ. ಲಾಭ ಪಡೆಯುವ ಹುನ್ನಾರವೂ ಸೇರಿದೆ. ನ್ಯಾಯ ಕೊಡಿಸುವ ನೆಪದಲ್ಲಿ ಧರ್ಮಸ್ಥಳವನ್ನು ಟಾರ್ಗೆಟ್ ಮಾಡ್ತಿದ್ದಾರೆ. ಇದರ ಹಿಂದೆ ಇರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಧರ್ಮಸ್ಥಳ ಹಾಗೂ ಧರ್ಮಾಧಿಕಾರಿಗಳ ವಿರುದ್ಧ ಅಪಪ್ರಚಾರ ಮಾಡಿದವರ ವಿರುದ್ಧ ತನಿಖೆ ಅಗಬೇಕು. ಡಿ.ಕೆ ಶಿವಕುಮಾರ್ ಅವರೇ ಇದರ ಹಿಂದೆ ಷಡ್ಯಂತ್ರ ನಡೀತಿದೆ ಎಂದು ಹೇಳಿದ್ದಾರೆ. ಷಡ್ಯಂತ್ರ ಯಾರು ಮಾಡ್ತಿದ್ದಾರೆ? ಈ ವಿಚಾರವನ್ನು ಬಹಿರಂಗಪಡಿಸಬೇಕು. ಈಗ ಸತ್ಯ ಹೇಳುವುದಕ್ಕೆ ಸೂಕ್ತ ಕಾಲ ಎಂದು ಒತ್ತಾಯಿಸಿದರು. ಅನಾಮಿಕನ ಹಿನ್ನೆಲೆಯೂ ತನಿಖೆ ಆಗಬೇಕು. ಅನಾಮಿಕನ ಹಿಂದಿರುವ ಶಕ್ತಿಯ ಬಗ್ಗೆಯೂ ತನಿಖೆ ಆಗಬೇಕು. ಮುಸುಕುಧಾರಿ ಹೇಳಿದ ಹಾಗೇ ಗುಂಡಿ ತೋಡಲಾಗಿದೆ. ಅಲ್ಲಿ ಏನು ಸಿಕ್ಕಿದೆ ಎಂದು ಅವರು ಪ್ರಶ್ನಿಸಿದ್ದಾರೆ.
























