ಎಲ್ಲರ ಅಭಿಪ್ರಾಯ ಪಡೆದು ದ.ಕ.ಜಿಲ್ಲೆ ಹೆಸರು ಬದಲಾವಣೆ ತೀರ್ಮಾನ : ಕೃಷ್ಣ ಬೈರೇಗೌಡ ಭರವಸೆ

ಸದನದಲ್ಲಿ ಮಂಗಳೂರು ಎಂದು ನಾಮಕರಣ ಮಾಡುವುದಕ್ಕೆ ಒತ್ತಾಯಿಸಿದ ಶಾಸಕ ಹರೀಶ್‌ ಪೂಂಜ

ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಎಂದು ಮರುನಾಮಕರಣ ಮಾಡುವ ಸಂಬಂಧ ಪರ-ವಿರೋಧ ಮನವಿಗಳು ಸ್ವೀಕೃತವಾಗಿವೆ. ಜಿಲ್ಲಾಧಿಕಾರಿಯಿಂದ ವರದಿ ಬರುವುದು ಬಾಕಿಯಿದೆ. ಎಲ್ಲರ ಅಭಿಪ್ರಾಯ ಪಡೆದು ಸರ್ಕಾರ ಮುಂದಿನ ತೀರ್ಮಾನ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಬುಧವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಹರೀಶ್ ಪೂಂಜ ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಎಂದು ಮರುನಾಮಕರಣ ಮಾಡುವ ಬಗ್ಗೆ ಗಮನ ಸೆಳೆದ ಸೂಚನೆಗೆ ಉತ್ತರಿಸಿ, ದಕ್ಷಿಣ ಕನ್ನಡ ಭಾಗವನ್ನು 17ನೇ ಶತಮಾನದಲ್ಲೆ ಕ್ಯಾನರೀಸ್ ಎಂದು ಕರೆಯುತ್ತಿದ್ದರು. ಕ್ಯಾನರೀಸ್ ಎಂದರೆ ಕನ್ನಡ ನಾಡು ಎಂದರ್ಥ. ಕನ್ನಡದ ಮೊದಲ ಸಾಮ್ರಾಜ್ಯ ಬನವಾಸಿ ಕಂದಬರದ್ದು. ಈಗ ಅದು ಉತ್ತರ ಕನ್ನಡ ಜಿಲ್ಲೆ. ಕನ್ನಡ ಎಂಬ ಪದಕ್ಕೂ ನಮಗೂ ಬಾಂಧವ್ಯವಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮರುನಾಮಕರಣಕ್ಕೆ ಸರ್ಕಾರ ಮುಕ್ತ ಮನಸ್ಸು ಹೊಂದಿದೆ. ಪರ, ವಿರೋಧ ಎರಡು ಅಭಿಪ್ರಾಯಗಳು ಇರುವುದರಿಂದ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದುವರೆಯೋಣ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.





















































 
 

ಇದಕ್ಕೂ ಮುನ್ನ ಗಮನ ಸೆಳೆದ ಹರೀಶ್ ಪೂಂಜ, ಮಂಗಳೂರು ಎಂಬುದು ಜಗತ್ತಿನಲ್ಲಿ ಬ್ರ್ಯಾಂಡ್ ಆಗಿದೆ. ಜಗತ್ತಿನ ಯಾವುದೆ ಭಾಗದಲ್ಲಿ ವ್ಯಾಪಾರ, ಉದ್ಯೋಗ ಮಾಡುವ ನಮ್ಮ ಭಾಗದವರು ತಮ್ಮನ್ನು ಮಂಗಳೂರಿನವರು ಎಂದು ಗುರುತಿಸಿಕೊಳ್ಳುತ್ತಾರೆ. 1931ರಿಂದ ಜಿಲ್ಲೆಯ ಹೆಸರು ಮರುನಾಮಕರಣಕ್ಕೆ ಹೋರಾಟ ನಡೆಯುತ್ತಲೆ ಇದೆ. ನಮ್ಮ ಜಿಲ್ಲೆಯಲ್ಲಿರುವ ವಿಮಾಣ ನಿಲ್ದಾಣ, ಬಂದರು, ವಿಶ್ವವಿದ್ಯಾಲಯ, ಕೆಮಿಕಲ್ ಇಂಡಸ್ಟ್ರೀಸ್, ಸೆಂಟ್ರಲ್ ರೈಲು ನಿಲ್ದಾಣ ಎಲ್ಲವೂ ಮಂಗಳೂರು ಹೆಸರಿನಿಂದಲೇ ಗುರುತಿಸಿಕೊಂಡಿವೆ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್ ಯು.ಟಿ.ಖಾದರ್ ಕೆಡಿಪಿ ಸಭೆಗಳು ನಡೆದಾಗ ಈ ಬಗ್ಗೆ ಚರ್ಚೆ ಮಾಡಿ ಜಿಲ್ಲಾಮಟ್ಟದಿಂದ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡೋಣ. ಹೆಸರು ಬದಲಾವಣೆಯ ಸಾಧಕ ಬಾಧಕಗಳ ಬಗ್ಗೆ ನಾವು ಚರ್ಚೆ ಮಾಡಬೇಕು. ಕೇವಲ ಅಭಿವೃದ್ಧಿ ದೃಷ್ಟಿಯಿಂದ ಅಷ್ಟೇ ಅಲ್ಲ, ನಮ್ಮ ಸಂಸ್ಕೃತಿ, ಪರಂಪರೆ, ಆಚಾರ, ವಿಚಾರ ಎಲ್ಲವೂ ಇದರಲ್ಲಿ ಅಡಗಿದೆ. ಹೆಸರು ಬದಲಾವಣೆ ಮಾಡುವುದಕ್ಕಿಂತ ಹೆಚ್ಚಾಗಿ, ನಾವು ಜಿಲ್ಲೆಯಲ್ಲಿ ಪ್ರೀತಿ, ಸೌಹಾರ್ದದ ವಾತಾವರಣ ನಿರ್ಮಾಣ ಮಾಡಬೇಕು ಎಂದು ಹೇಳಿದರು.

error: Content is protected !!
Scroll to Top