ಗುಂಡಿಗಳಲ್ಲಿ ಹೆಣಗಳ ಕುರುಹು ಪತ್ತೆಯಾಗದಿರುವ ಹಿನ್ನೆಲೆಯಲ್ಲಿ ಹೆಚ್ಚುತ್ತಿದೆ ಅನುಮಾನ
ಮಂಗಳೂರು: ಧರ್ಮಸ್ಥಳದಲ್ಲಿ ಶವ ಹೂತಿಟ್ಟೆದ್ದೇನೆ ಎಂದು ಆರೋಪಿಸಿದ ಮುಸುಕುಧಾರಿ ವ್ಯಕ್ತಿ ತೋರಿಸಿದ 16ಕಿಇಂತಲೂ ಹೆಚ್ಚು ಸ್ಥಳಗಳಲ್ಲಿ ಅಗೆದರೂ ಶವದ ಯಾವುದೇ ಕುರುಹುಗಳು ಪತ್ತೆಯಾಗದಿರುವ ಹಿನ್ನೆಲೆಯಲ್ಲಿ ಈ ವ್ಯಕ್ತಿಯನ್ನೇ ವಶಕ್ಕೆ ತೆಗೆದುಕೊಂಡು ತನಿಖೆಗೆ ಒಳಪಡಿಸಬೇಕೆಂಬ ಆಗ್ರಹ ಬಲವಾಗಿ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಅವನನ್ನು ಮಂಪರು ಪರೀಕ್ಷೆಗೆ ಒಳಪಡಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಮುಸುಕುಧಾರಿ ತೋರಿಸಿದ ಬಹುಮುಖ್ಯ ಸ್ಥಳ ಎನ್ನಲಾಗುತ್ತಿದ್ದ 13ನೇ ಪಾಯಿಂಟ್‌ನಲ್ಲಿ ಮಂಗಳವಾರ ಜಿಪಿಆರ್ ರಾಡಾರ್ ಮತ್ತು ಡ್ರೋನ್ ಬಳಸಿ ಸ್ಕ್ಯಾನ್ ಮಾಡಲಾಗಿತ್ತು. ಇದರಲ್ಲಿ ಯಾವುದೇ ನಿಖರ ಫಲಿತಾಂಶ ಗೋಚರವಾಗದಿದ್ದ ಕಾರಣ ಎರಡು ಜೆಸಿಬಿಗಳನ್ನು ಬಳಸಿಕೊಂಡು ಸುಮಾರು 18 ಅಡಿಗಳಷ್ಟು ಆಳಕ್ಕೆ ಬೃಹತ್ ಹೊಂಡ ತೋಡಲಾಗಿತ್ತು. ಇಷ್ಟು ತೋಡಿದರೂ ಕೆಸರುಮಣ್ಣು ಬಿಟ್ಟರೆ ಬೇರೇನೂ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಮುಸುಕುಧಾರಿಯ ಬಗ್ಗೆ ಅನುಮಾನ ಇನ್ನಷ್ಟು ದಟ್ಟವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ಸಾವಿರಾರು ಮಂದಿ ಈ ಷಡ್ಯಂತ್ರವನ್ನು ಬಯಲಿಗೆಳೆಯಲು ಮುಸುಕುಧಾರಿಯನ್ನು ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.
ಪಾಯಿಂಟ್ ನಂಬರ್ 13ರ ಮತ್ತೊಂದು ಭಾಗದಲ್ಲಿ ಇಂದು ಉತ್ಖನನ ನಡೆಯಲಿದ್ದು, ಅಲ್ಲೂ ಏನೂ ಸಿಗದಿದ್ದರೆ ಮುಸುಕುಧಾರಿಯ ಕುರಿತು ತನಿಖೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮಂಪರು ಪರೀಕ್ಷೆಗೆ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ಎಸ್‌ಐಟಿ ಚಿಂತನೆ ನಡೆಸಿದೆ. ತನಿಖೆಯ ಮುಂದುವರಿದ ಭಾಗವಾಗಿ ಈ ಕ್ರಮ ಅಗತ್ಯ ಎನ್ನಲಾಗಿದೆ. ದೂರುದಾರನ ಪ್ರಾರಂಭಿಕ ಹೇಳಿಕೆ ಹಾಗೂ ನಂತರ ನೀಡಿದ ಹೇಳಿಕೆಗಳಲ್ಲಿ ಗೊಂದಲವಿದೆಯಾ ಎಂದು ಪರಿಶೀಲನೆಗೆ ಮುಂದಾಗಿದೆ.
ಜಾಗಗಳ ಸ್ಥಳ ವಿವರಣೆಗಳಲ್ಲಿ ಸಮಯ, ದಿನಾಂಕ ಮತ್ತು ಭಾಗವಹಿಸಿದವರ ಹೆಸರುಗಳಲ್ಲಿ ಗೊಂದಲವಿದೆಯಾ ಎಂದು ಪರಿಶೀಲಿಸಲಿದೆ. ತನಿಖೆಯಲ್ಲಿ ದೊರೆತ ತಾಂತ್ರಿಕ ಮಾಹಿತಿ, ದಾಖಲೆಗಳು, ದೂರುದಾರ ನೀಡಿದ ಮೌಖಿಕ ಹೇಳಿಕೆಗಳ ನಡುವೆ ಹೊಂದಾಣಿಕೆ ಇಲ್ಲದಿದ್ದರೆ ಅರ್ಜಿ ಸಲ್ಲಿಸಲಿದೆ. ಗೊಂದಲವಿದ್ದರೆ ತನಿಖೆಗೆ ಅಗತ್ಯವಾದ ನಿಖರ ಮಾಹಿತಿಯನ್ನು ಪಡೆಯಲು ಮಂಪರು ಪರೀಕ್ಷೆಗೆ ಅರ್ಜಿ ಸಲ್ಲಿಕೆ ಸಾಧ್ಯತೆ ಇದೆ.
ಪಾಯಿಂಟ್ ನಂಬರ್ 13ರಲ್ಲಿ ಇಂದೂ ಉತ್ಖನನ ನಡೆಯಲಿದೆ. ಜಿಪಿಅರ್ ಸ್ಕ್ಯಾನ್‌ನಲ್ಲಿ ಪತ್ತೆಯಾಗದೆ ಇದ್ದರೂ ಉತ್ಖನನಕ್ಕೆ ದೂರುದಾರ ಪಟ್ಟು ಹಿಡಿದಿದ್ದಾನೆ. ವಿಚಾರಣೆ ವೇಳೆ ಕೊಟ್ಟ ಹೇಳಿಕೆ ಆಧಾರದಲ್ಲೇ 30 ಜಾಗ ಅಗೆಯಿರಿ ಅಂತ ಒತ್ತಾಯಿಸಿದ್ದಾನೆ. ಈಗಾಗಲೇ ಅಧಿಕೃತ 16 ಪಾಯಿಂಟ್ ಜೊತೆಗೆ ಅಕ್ಕಪಕ್ಕದ ಜಾಗ ಸೇರಿ 20ಕ್ಕೂ ಹೆಚ್ಚು ಕಡೆ ಅಗೆತ ಆಗಿದೆ. ಹೀಗಾಗಿ, 30 ಸ್ಪಾಟ್ ಉತ್ಖನನ ಆಗಲೇಬೇಕು ಅಂತ ಅನಾಮಿಕ ಪಟ್ಟು ಹಿಡಿದಿದ್ದಾನೆ ಎನ್ನಲಾಗುತ್ತಿದೆ.
























