ಸೆ.1ರಿಂದ ಕಾಯಂಗೊಳಿಸಿ ನೈಋತ್ಯ ರೈಲ್ವೆ ಆದೇಶ
ಮಂಗಳೂರು: ವಿಜಯಪುರ–ಮಂಗಳೂರು ನಡುವಿನ ಸೆಂಟ್ರಲ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 07377/78 ವಿಶೇಷ ರೈಲು) ಇನ್ನು ಮುಂದೆ ಕಾಯಂ ಆಗಿ ಓಡಲಿದೆ. ಇಷ್ಟರ ತನಕ ತಾತ್ಕಾಲಿಕ ನೆಲೆಯಲ್ಲಿ ಸಂಚಾರ ನಡೆಸುತ್ತಿದ್ದ ಈ ರೈಲಿನ ಅವಧಿಯನ್ನು ಕಾಲಕಾಲಕ್ಕೆ ವಿಸ್ತರಿಸಲಾಗುತ್ತಿತ್ತು. ಇದೀಗ ನೈರುತ್ಯ ರೈಲ್ವೆ ವಲಯ ರೈಲು ಸೇವೆಯನ್ನು ಕಾಯಂಗೊಳಿಸಿ ಆದೇಶ ಹೊರಡಿಸಿದೆ.
ವಿಜಯಪುರದಿಂದ ಸೆಪ್ಟೆಂಬರ್ 1 ಹಾಗೂ ಮಂಗಳೂರು ಸೆಂಟ್ರಲಿನಿಂದ ಸೆಪ್ಟೆಂಬರ್ 2ರಿಂದ ಈ ರೈಲು ಕಾಯಂ ರೈಲಾಗಿ ಓಡಲಿದೆ. ಈ ರೈಲನ್ನು ಕಾಯಂಗೊಳಿಸಲು ಪ್ರಯಾಣಿಕರ ಸಂಘಗಳ ನಿರಂತರ ಹೋರಾಟ, ನಾಗರಿಕರು ಹಾಗೂ ವಿವಿಧ ಸಂಘಟನೆಗಳಿಂದ ನಿರಂತರ ಬೆಂಬಲ ಮತ್ತು ಸತತ ಪ್ರಯತ್ನ, ಸಂಸದರಿಂದ ದೊರೆತ ಬೆಂಬಲ, ರಮೇಶ್ ಜಿಗಜಿಣಗಿ ಅವರ ವಿಶೇಷ ಪ್ರಯತ್ನವಿದೆ.
ಈ ನಿರ್ಧಾರದಿಂದ ಸುಬ್ರಹ್ಮಣ್ಯ, ಧರ್ಮಸ್ಥಳ, ಬಂಟ್ವಾಳ, ಪುತ್ತೂರು ಹಾಗೂ ಇತರ ನಗರಗಳಿಂದ ಹಾಸನ, ಹುಬ್ಬಳ್ಳಿ, ಗದಗ, ವಿಜಯಪುರ ಹಾಗೂ ಇನ್ನಿತರ ಕಡೆಗಳಿಗೆ ಹೋಗುವ ಭಕ್ತರು, ವಿದ್ಯಾರ್ಥಿಗಳು ಮತ್ತು ಇತರ ಪ್ರಯಾಣಿಕರಿಗೆ ಬಹಳಷ್ಟು ಪ್ರಯೋಜನವಾಗಲಿದೆ ಎಂದು ರೈಲು ಬಳಕೆದಾರರು ಸಂತಸ ವ್ಯಕ್ತಪಡಿಸಿದ್ದಾರೆ.
























