ಐಪಿಎಸ್ ಅಧಿಕಾರಿಯನ್ನೊಳಗೊಂಡಿರುವ ತಂಡದಿಂದ ವಿವಿಧೆಡೆ ತೆರಳಿ ಮಾಹಿತಿ ಸಂಗ್ರಹ
ಧರ್ಮಸ್ಥಳ: ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ತನಿಖೆ ಆರಂಭಿಸಿದೆ. ಧರ್ಮಸ್ಥಳ ಗ್ರಾಮ ಪಂಚಾಯತ್‌ಗೆ ಆಯೋಗದ ಅಧಿಕಾರಿಗಳ ತಂಡ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದೆ.
ಬೆಳ್ತಂಗಡಿ ತಾಲೂಕಿನಲ್ಲಿ ಬೀಡುಬಿಟ್ಟ ನಾಲ್ವರು ಅಧಿಕಾರಿಗಳ ತಂಡದಲ್ಲಿ ಓರ್ವ ಐಪಿಎಸ್ ಅಧಿಕಾರಿ ಇದ್ದಾರೆ. ವಿವಿಧ ಆಯಾಮಗಳಲ್ಲಿ ದಾಖಲೆ ಮತ್ತು ಮಾಹಿತಿಗಳ ಸಂಗ್ರಹ ಮಾಡುತ್ತಿರುವ ತಂಡ ಪಂಚಾಯತ್‌ನಿಂದ ದಾಖಲೆಗಳನ್ನು ಕೇಳಿ ಪರಿಶೀಲನೆ ನಡೆಸುತ್ತಿದೆ.
ಮುಂದಿನ ನಾಲ್ಕೈದು ದಿನ ಧರ್ಮಸ್ಥಳದಲ್ಲಿ ಇರಲಿರುವ ಮಾನವ ಹಕ್ಕುಗಳ ಆಯೋಗ ಸ್ವಚ್ಛತಾ ಕಾರ್ಮಿಕರಿಂದ ಹೇಳಿಕೆಗಳ ಸಂಗ್ರಹ ಮಾಡಲಿದೆ. ಗೌಪ್ಯವಾಗಿ ಹಲವರ ಭೇಟಿ ಮಾಡಿ ವಿಚಾರಣೆ ಆಯೋಗ ವಿಚಾರಣೆ ನಡೆಸಲಿದೆ. ಎಸ್‌ಐಟಿ ಪೊಲೀಸ್ ಸ್ಟೇಷನ್, ಬೆಳ್ತಂಗಡಿ ಪೊಲೀಸ್ ಸ್ಟೇಷನ್, ಶವ ಹೂತಿಟ್ಟ ಪಾಯಿಂಟ್‌ಗಳಿಗೆ ಭೇಟಿ ಪರಿಶೀಲನೆ ಮಾಡಲಿದೆ.
17 ಮಂದಿಯ ವಿರುದ್ಧ ದೂರು
ಈ ನಡುವೆ ತನ್ನನ್ನು ಕೆಲವರು ಹಿಂಬಾಲಿಸಿಕೊಂಡು ಬಂದು ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು 17 ಮಂದಿಯ ವಿರುದ್ಧ ಧರ್ಮಸ್ಥಳ ಗ್ರಾಮದಲ್ಲಿ ಕಾನೂನುಬಾಹಿರವಾಗಿ ಯುವತಿಯ ಮೃತದೇಹವನ್ನು ಹೂತು ಹಾಕಿರುವುದನ್ನು ನೋಡಿದ್ದೇನೆ ಎಂದು ಎಸ್ಐಟಿಗೆ ಮಾಹಿತಿ ನೀಡಿರುವ ಎರಡನೇ ದೂರುದಾರ ಜಯಂತ್ ಟಿ. ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ.
ಎಸ್ಐಟಿಗೆ ದೂರು ನೀಡಿದ ದಿನದಿಂದ ತನ್ನ ಮೇಲೆ ಹಲ್ಲೆ ಮಾಡಲು ಮಾಧ್ಯಮಗಳ ಮೂಲಕ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ವಸಂತ್ ಗಿಳಿಯಾರು, ಕಿರಿಕ್ ಕೀರ್ತಿ, ವಿಕಾಸ್ ಶಾಸ್ತ್ರಿ ಮತ್ತು ಪವರ್ ಟಿವಿ ಮುಖ್ಯಸ್ಥ ರಾಕೇಶ್ ಶೆಟ್ಟಿ ಎಂಬವರನ್ನು ದೂರಿನಲ್ಲಿ ಉಲ್ಲೇಖಿಸಿರುವ ಜಯಂತ್ ಟಿ., ತಂಡವೊಂದು ತನ್ನನ್ನು ಹಿಂಬಾಲಿಸಿಕೊಂಡು ಬಂದು ಕೊಲೆಗೆ ಯತ್ನಿಸುತ್ತಿದೆ ಎಂದು ಆರೋಪಿಸಿ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಬಗ್ಗೆ ಪರಿಶೀಲಿಸಲಾಗುತ್ತಿದ್ದು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ತಿಳಿಸಿದ್ದಾರೆ.
























