ನವದೆಹಲಿ: ಭಾರತದ ಆರ್ಥಿಕ ಅಭಿವೃದ್ಧಿ ಕ್ರಿಯಾತ್ಮಕ ಮತ್ತು ವೇಗವಾದ ಬೆಳವಣಿಗೆ ಕಾಣುತ್ತಿದೆ. ಈ ಅಂಶ ಜಗತ್ತಿನ ಬಾಸ್ ಎಂದು ಕರೆಸಿಕೊಳ್ಳುವ ದೊಡ್ಡಣ್ಣನಿಗೆ ಸಹಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಅಮೆರಿಕಾ ವಿರುದ್ಧ ರಕ್ಷಣಾ ಸಚಿವ ರಾಜ ನಾಥ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.
ಭಾರತದ ಮೇಲೆ ಸುಂಕ ಯುದ್ಧ ಹೇರಿದ ಅಮೆರಿಕಾ ಅಧ್ಯಕ್ಷ ಟ್ರಂಪ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಭಾರತದ ಆರ್ಥಿಕ ಬೆಳವಣಿಗೆಯ ವೇಗ ಗಮನಿಸಿದರೆ ಜಗತ್ತಿನ ಮಹಾಶಕ್ತಿಯಾಗಿ ಹೊಮ್ಮುವುದನ್ನು ತಡೆಯಲು ಯಾವ ಜಾಗತಿಕ ಶಕ್ತಿಗೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕೆಲ ರಾಷ್ಟ್ರಗಳು ತಮ್ಮನ್ನು ತಾವು ಎಲ್ಲಾ ರಾಷ್ಟ್ರಗಳಿಗೂ ಬಾಸ್ ಎಂದು ತಿಳಿದುಕೊಂಡಿವೆ. ಆ ರಾಷ್ಟ್ರಗಳಿಗೆ ಭಾರತದ ಅಭಿವೃದ್ಧಿ ಸಹಿಸುವುದು ಸಾಧ್ಯವಾಗುತ್ತಿಲ್ಲ. ಆದ್ದರಿಂದಲೇ ಭಾರತ ನಿರ್ಮಿತ ವಸ್ತುಗಳಿಗೆ ಆ ದೇಶಗಳಲ್ಲಿ ಬೆಲೆ ಹೆಚ್ಚುವಂತೆ ಮಾಡಲಾಗುತ್ತಿದೆ. ಇಂತಹ ಯತ್ನಗಳು ಕಾರ್ಯ ಸಾಧನೆ ಮಾಡುವುದು ಅಸಾಧ್ಯ ಎಂದು ಅವರು ತಿಳಿಸಿದ್ದಾರೆ.
ಭಾರತದ ಆರ್ಥಿಕತೆ ಪ್ರಸ್ತುತ ಅಗ್ರ 4 ನೇ ಸ್ಥಾನವನ್ನು ಅಲಂಕರಿಸಿದೆ. ರಕ್ಷಣಾ ಉತ್ಪನ್ನಗಳು ನಮ್ಮಲ್ಲೇ ತಯಾರಾಗುತ್ತವೆ. ರಫ್ತು ಸಹ ಮಾಡುತ್ತಿವೆ. ರಷ್ಯಾದಿಂದ ತೈಲ ಖರೀದಿಸುವ ರಾಷ್ಟ್ರಗಳ ವಿರುದ್ಧ ಅಮೆರಿಕಾ ಸಮರ ಸಾರಿರುವುದಾಗಿದೆ.
























