ನವದೆಹಲಿ: ಕರ್ನಾಟಕದ ಮಹಿಳೆಯೊಬ್ಬರು ಕಳೆದ ಲೋಕಸಭಾ ಚುನಾವಣೆಯಲ್ಲಿ ಎರಡು ಬಾರಿ ಮತ ಚಲಾಯಿಸಿದ್ದರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದು ರಾಜ್ಯ ಚುನಾವಣಾ ಆಯೋಗ ಈ ಬಗ್ಗೆ ದಾಖಲೆ ಸಲ್ಲಿಸುವಂತೆ ಚು. ಆಯೋಗ ರಾಗಾಗೆ ನೊಟೀಸ್ ನೀಡಿದೆ.
ಈ ಆರೋಪ ಸುಳ್ಳು ಎಂಬುದು ಫ್ಯಾಕ್ಟ್ ಚೆಕ್‌ನಿಂದ ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಆರೋಪ ಮಾಡಿದ್ದ ರಾಹುಲ್ ಗಾಂಧಿ ಈ ಬಗ್ಗೆ ಪತ್ರಿಕಾಗೋಷ್ಠಿಗಳಲ್ಲಿ ತೋರಿಸಿದ್ದ ದಾಖಲೆಗಳನ್ನು ನೀಡುವಂತೆ ಆಯೋಗ ತಿಳಿಸಿದೆ.
ಕೆಲ ದಿನಗಳ ಹಿಂದಷ್ಟೇ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಮತಗಳ್ಳತನ ನಡೆದ ಬಗ್ಗೆ ರಾಗಾ ಆರೋಪ ಮಾಡಿದ್ದರು. ಕರ್ನಾಟಕದಲ್ಲಿ ಶಕುನ್ ರಾಣಿ ಎಂಬಾಕೆ ಎರಡು ಬಾರಿ ಮತ ಚಲಾಯಿಸಿದ್ದರು ಎಂದು ಅವರು ಆರೋಪಿಸಿದ್ದರು. ಚುನಾವಣಾ ಆಯೋಗ ಈ ಸಂಬಂಧ ಆ ಮಹಿಳೆಯನ್ನು ವಿಚಾರಣೆ ಮಾಡಿದ್ದು, ಈ ಸಂದರ್ಭದಲ್ಲಿ ಆಕೆ ಒಂದೇ ಬಾರಿ ಮತ ಚಲಾವಣೆ ಮಾಡಿದ್ದಾಗಿ ತಿಳಿದು ಬಂದಿತ್ತು. ಆ ಅಂಶವನ್ನೂ ಆಯೋಗ ನೊಟೀಸ್‌ನಲ್ಲಿ ಉಲ್ಲೇಖ ಮಾಡಿದೆ.
ಹಾಗೆಯೇ ರಾಹುಲ್ ಗಾಂಧಿ ಚುನಾವಣಾ ಅಕ್ರಮದ ಬಗ್ಗೆ ತೋರಿಸಿದ ದಾಖಲೆ ಚುನಾವಣಾಧಿಕಾರಿ ನೀಡಿದ ದಾಖಲೆ ಅಲ್ಲ ಎನ್ನುವುದು ಸಾಬೀತಾಗಿದೆ. ಈ ಹಿನ್ನೆಲೆ ಆರೋಪ ಮಾಡಿರುವ ವಿಷಯಗಳಿಗೆ ಸಂಬಂಧಿಸಿದ ಹಾಗೆ ಪೂರಕ ದಾಖಲೆಗಳನ್ನು ನೀಡುವಂತೆ ರಾಹುಲ್ ಗಾಂಧಿಗೆ ಆಯೋಗ ನೊಟೀಸು ನೀಡಿದೆ.
























