ಮಂಗಳೂರು : ಈಜು ಕೋಚ್‌ ಈಜುಕೊಳದಲ್ಲಿ ಮುಳುಗಿ ಸಾವು

ಈಜುವಾಗಲೇ ಹೃದಯಾಘಾತವಾಗಿ ಉಸಿರುಕಟ್ಟಿ ಮೃತ್ಯು

ಮಂಗಳೂರು: ಈಜು ಕೋಚ್‌ ಈಜುಕೊಳದಲ್ಲೇ ಮುಳುಗಿ ಸಾವನ್ನಪ್ಪಿದ ದುರಂತ ಘಟನೆ ಮಂಗಳೂರಿನಲ್ಲಿ ಸಂಭವಿಸಿದೆ. ಈಜುಕೊಳದ ಲೈಫ್‌ಗಾರ್ಡ್ ಕೂಡ ಆಗಿದ್ದ ಅವರು ಹೃದಯಾಘಾತದಿಂದಾಗಿ ಮಂಗಳೂರಿನ ಲೇಡಿಹಿಲ್‌ನಲ್ಲಿರುವ ಮಹಾನಗರ ಪಾಲಿಕೆಯ ಈಜುಕೊಳದಲ್ಲಿ ಭಾನುವಾರ ಈಜುವಾಗಲೇ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಬಂಟ್ವಾಳ ತಾಳುಕಿನ ಕಲ್ಲಡ್ಕದ ಸಮೀಪದ ಸೂರಿಕುಮೇರಿನ ಕೆ. ಚಂದ್ರಶೇಖರ್ ರೈ ಸೂರಿಕುಮೇರು (52) ಎಂದು ಗುರುತಿಸಲಾಗಿದೆ.

ನಿರ್ವಹಣೆ ಕೆಲಸಗಳು ನಡೆಯುತ್ತಿದ್ದರಿಂದ ಭಾನುವಾರ ಈಜುಕೊಳಕ್ಕೆ ರಜೆ ಇತ್ತು. ಈ ಸಮಯದಲ್ಲಿ ಈಜಲು ನೀರಿಗಿಳಿದ ಅವರಿಗೆ ನೀರಿನೊಳಗೆ ಹೃದಯಾಘಾತವಾಗಿದೆ ಎನ್ನಲಾಗಿದೆ.





















































 
 

ಕೆ. ಚಂದ್ರಶೇಖರ್ ರೈ 2023ರಲ್ಲಿ ಈಜುಕೊಳದ ನೀರಿನೊಳಗೆ ಒಂದು ನಿಮಿಷದಲ್ಲಿ 28 ಬಾರಿ ಸಮ್ಮರ್‌ಸಾಲ್ಟ್ ಎಂಬ ಸ್ಟಂಟ್ ಮಾಡಿ ‘ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ಸ್ಥಾನ ಗಳಿಸಿದ್ದರು. ಅದಕ್ಕೂ ಮೊದಲು ಎರಡು ಬಾರಿ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಸ್ಥಾನ ಗಳಿಸಿದ್ದರು.

ಉಡುಪಿಯ ಈಜುಕೊಳದಲ್ಲಿ ಗುತ್ತಿಗೆ ಆಧಾರದಲ್ಲಿ ಲೈಫ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ್ ಮೂರು ವರ್ಷದ ಹಿಂದೆ ನಗರದ ಮಂಗಳೂರು ಮಹಾನಗರಪಾಲಿಕೆ ಈಜುಕೊಳದ ನಿರ್ವಹಣೆ ಮಾಡುತ್ತಿದ್ದರು. ಜೀವರಕ್ಷಕರಾಗಿದ್ದ ಅವರು ಈಜು ತರಬೇತುದಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.

ಭಾನುವಾರ ಬೆಳಗ್ಗೆ ಕೆಲಕಾಲ ಈಜುಕೊಳದಲ್ಲಿ ಅಭ್ಯಾಸ ಮಾಡುವುದಾಗಿ ಹೇಳಿ ಮೊಬೈಲ್ ಫೋನನ್ನು ಕಾವಲುಗಾರನಿಗೆ ನೀಡಿದ್ದ ಚಂದ್ರಶೇಖರ್ ಡೈವ್ ಮಾಡಿದ್ದರು. ಬಳಿಕ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಸ್ವಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.

error: Content is protected !!
Scroll to Top