ಬೆಂಗಳೂರು: ಪ್ರಧಾನಿ ಮೋದಿ ಅವರು ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರ ವರೆಗಿನ ಮೆಟ್ರೋ ಹಳದಿ ಮಾರ್ಗಕ್ಕೆ ಅಧಿಕೃತ ಚಾಲನೆ ನೀಡಿದರು. ಇದರಿಂದಾಗಿ ಈ ಮಾರ್ಗಗಳಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗುವ ಸಾಧ್ಯತೆ ಸಹ ಇದೆ.
ನಮ್ಮ ಮೆಟ್ರೋ ಆರೆಂಜ್ ಲೈನ್‌ಗೆ ಪ್ರಧಾನಿ ಮೋದಿ ಅವರು ಇದೇ ಸಂದರ್ಭದಲ್ಲಿ ಶಂಕುಸ್ಥಾಪನೆ ಮಾಡಿದರು.
ಐಐಐಟಿ ಆಡಿಟೋರಿಯಂನಲ್ಲಿ ಈ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ವಿ. ಸೋಮಣ್ಣ, ಪ್ರಧಾನಿ ಮೋದಿ ಅವರು ಕಾಯಕ ಯೋಗಿ. ಅವರು ನಮ್ಮ ಕಾಲದ ನಿಜವಾದ ಸಂತ ಮತ್ತು ದಾರ್ಶನಿಕ ನಾಯಕ. ಅವರ ನಾಯಕತ್ವದಲ್ಲಿ ಭಾರತ ಯಾರ ಮುಂದೆಯೂ ತಲೆಬಾಗುವುದಿಲ್ಲ. ಕೈ ಚಾಚುವುದಿಲ್ಲ ಎಂದಿದ್ದಾರೆ. ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಬಗೆಗೂ ಮಾತನಾಡಿದ ಅವರು, ಆ ಕಾರ್ಯ ಶ್ಲಾಘನೀಯ ಎಂದು ಪಿ.ಎಂ. ಮೋದಿ ಅವರನ್ನು ಹಾಡಿ ಹೊಗಳಿದರು.
ಸಿಎಂ ಸಿದ್ದರಾಮಯ್ಯ ಮಾತನಾಡಿ, ಪ್ರಧಾನಿ ಮೋದಿ ಅವರನ್ನು ಕರ್ನಾಟಕ ಸರ್ಕಾರದ ಪರ ಸ್ವಾಗತಿಸುತ್ತೇನೆ. ಮೆಟ್ರೋ ಕೇಂದ್ರ ಮತ್ತು ರಾಜ್ಯದ ಸಹಯೋಗದಿಂದ ನಡೆಯುತ್ತಿರುವ ಯೋಜನೆಯಾಗಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ ತಾಂತ್ರಿಕ ಮತ್ತು ಹಣಕಾಸಿನ ನೆರವು ನೀಡಿದೆ. ರಾಜ್ಯ ಸರ್ಕಾರ 50% ದಷ್ಟು ಅನುದಾನ ನೀಡುತ್ತಿದೆ. ಇದು ಕೇಂದ್ರ ಮತ್ತು ರಾಜ್ಯದ ಜಂಟಿ ಯೋಜನೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಡಿಸಿಎಂ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮನೋಹರಲಾಲ್ ಕಟ್ಟರ್, ಶೋಭಾ ಕರಂದ್ಲಾಜೆ, ಸಂಸದ ತೇಜಸ್ವಿ ಸೂರ್ಯ, ಡಾ. ಸಿ.ಎನ್. ಮಂಜುನಾಥ್ ಉಪಸ್ಥಿತರಿದ್ದರು.
























