ರಿಟರ್ನ್ ಟಿಕೆಟ್‌ಗಳ ಮೇಲೆ ಸಿಗಲಿದೆ ಈ ವಿಶೇಷ ರಿಯಾಯಿತಿ
ನವದೆಹಲಿ: ಸಾಲು ಸಾಲು ಹಬ್ಬಗಳು ಬರುತ್ತಿದ್ದಂತೆ ಭಾರತೀಯ ರೈಲ್ವೆ ಮುಂಗಡವಾಗಿ ಬುಕ್ ಮಾಡುವ ರಿಟರ್ನ್ ಜರ್ನಿ ಟಿಕೆಟ್‌ಗಳ ಮೇಲೆ ಭಾರಿ ರಿಯಾಯಿತಿಯನ್ನು ಘೋಷಿಸಿದೆ. ರೌಂಡ್ ಟ್ರಿಪ್ ಪ್ಯಾಕೇಜ್ ಫಾರ್ ಫೆಸ್ಟಿವಲ್ ರಶ್ ಯೋಜನೆಯಡಿಯಲ್ಲಿ ಇದನ್ನು ಜಾರಿಗೆ ತರಲಾಗಿದ್ದು, ಅಕ್ಟೋಬರ್ 13ರಿಂದ 26 ರವರೆಗೆ ನಿಗದಿಪಡಿಸಲಾಗುವ ಪ್ರಯಾಣಗಳಿಗೆ ಬುಕ್ಕಿಂಗ್ ಆಗಸ್ಟ್ 14ರಿಂದ ಶೇ.20ರಷ್ಟು ಡಿಸ್ಕೌಂಟ್ ಸಿಗಲಿದೆ. ಹಬ್ಬದ ಋತುವಿನಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಿ ಸುಗಮ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುವ ಸಲುವಾಗಿ ಈ ಯೋಜನೆಯನ್ನು ಪರಿಚಯಿಸಲಾಗಿದೆ.
ರೌಂಡ್ ಟ್ರಿಪ್ ಪ್ಯಾಕೇಜ್ ಫಾರ್ ಫೆಸ್ಟಿವಲ್ ರಶ್ ಪ್ರಾಯೋಗಿಕ ಯೋಜನೆಯ ಕುರಿತು ಶುಕ್ರವಾರ ಭಾರತೀಯ ರೈಲ್ವೆ ಮಂಡಳಿಯ ಸುತ್ತೋಲೆ ಪ್ರಕಟಿಸಿದೆ. ಇದರ ಪ್ರಕಾರ ಹಿಂದಿರುಗುವ ಪ್ರಯಾಣಕ್ಕಾಗಿ ದೃಢೀಕೃತ ಟಿಕೆಟ್‌ಗಳನ್ನು ಕಾಯ್ದಿರಿಸುವ ಪ್ರಯಾಣಿಕರಿಗೆ ರಿಟರ್ನ್ ಪ್ರಯಾಣದ ಮೂಲ ದರದಲ್ಲಿ ಶೇ. 20ರಷ್ಟು ರಿಯಾಯಿತಿಯನ್ನು ನೀಡಲಾಗುತ್ತದೆ. ಇದರಿಂದ ಜನಸಂದಣಿಯನ್ನು ಮರುಹಂಚಿಕೆ ಮಾಡುವುದು, ತೊಂದರೆ ಮುಕ್ತ ಬುಕ್ಕಿಂಗ್, ವಿಶೇಷ ರೈಲುಗಳ ವ್ಯವಸ್ಥೆಯನ್ನು ಮಾಡಲು ಅನುಕೂಲವಾಗುವುದು. ಈ ಯೋಜನೆಯ ಮೂಲಕ ರೈಲು ಸೇವೆಗಳ ಬಳಕೆಯನ್ನು ಹೆಚ್ಚಿಸುವ ಗುರಿಯನ್ನು ಭಾರತೀಯ ರೈಲ್ವೆಯು ಹೊಂದಿದೆ.
ಅಕ್ಟೋಬರ್ 13ರಿಂದ 26ರ ನಡುವೆ ನಿಗದಿಪಡಿಸಲಾದ ಪ್ರಯಾಣಗಳಿಗೆ ಆಗಸ್ಟ್ 14ರಿಂದ ಬುಕ್ಕಿಂಗ್ ತೆರೆಯಲಿದೆ. ನವೆಂಬರ್ 17ರಿಂದ ಡಿಸೆಂಬರ್1ರ ನಡುವಿನ ಪ್ರಯಾಣಕ್ಕಾಗಿ ಕನೆಕ್ಟಿಂಗ್ ಪ್ರಯಾಣ ವೈಶಿಷ್ಟ್ಯವನ್ನು ಬಳಸಿಕೊಂಡು ಅನುಗುಣವಾದ ರಿಟರ್ನ್ ಪ್ರಯಾಣವನ್ನು ಬುಕ್ ಮಾಡಬೇಕು. ಮುಂಗಡ ಕಾಯ್ದಿರಿಸುವಿಕೆ ವೇಳೆ ನಿಗದಿಪಡಿಸಿರುವ ಮಾನದಂಡಗಳು ರಿಟರ್ನ್ ಪ್ರಯಾಣ ಬುಕಿಂಗ್‌ಗೆ ಅನ್ವಯವಾಗುವುದಿಲ್ಲ. ಎಲ್ಲ ವರ್ಗಗಳು ಮತ್ತು ರೈಲುಗಳಲ್ಲಿ ಈ ಯೋಜನೆ ಮಾನ್ಯವಾಗಿದ್ದು, ದೃಢಪಡಿಸಿದ ಟಿಕೆಟ್‌ಗಳಿಗೆ ಮಾತ್ರ ಅನ್ವಯಾವಾಗುವುದು.
ಪ್ರಯಾಣದ ಟಿಕೆಟ್‌ಗಳನ್ನು ಆನ್‌ಲೈನ್ ಅಥವಾ ಕೌಂಟರ್‌ಗಳಲ್ಲಿ ಬುಕ್ ಮಾಡಬೇಕು. ಇದರ ಪಿಎನ್‌ಆರ್‌ಗೆ ಯಾವುದೇ ಹೆಚ್ಚುವರಿ ದರ ಹಾಕಲಾಗುವುದಿಲ್ಲ. ಬುಕ್ ಮಾಡಿದ ಟಿಕೆಟ್‌ಗಳಿಗೆ ಶುಲ್ಕ ಮರುಪಾವತಿ ಮಾಡಲಾಗುವುದಿಲ್ಲ. ಫ್ಲೆಕ್ಸಿ ದರ ಹೊಂದಿರುವ ರೈಲುಗಳನ್ನು ಹೊರತುಪಡಿಸಿ ವಿಶೇಷ ರೈಲುಗಳು ಸೇರಿದಂತೆ ಎಲ್ಲ ವರ್ಗಗಳು ಮತ್ತು ರೈಲುಗಳು ಈ ಯೋಜನೆಗೆ ಒಳಪಡುತ್ತವೆ. ರೈಲು ಪ್ರಯಾಣ ಕೂಪನ್‌ಗಳು, ವೋಚರ್‌ಗಳು, ಪಾಸ್‌ಗಳು ಮತ್ತು ಪಿಟಿಒಗಳ ಬಳಕೆಯನ್ನು ಹೊರತಾಗಿ ಇದರಲ್ಲಿ ಯಾವುದೇ ಮಾರ್ಪಾಡುಗಳು ಅಥವಾ ಹೆಚ್ಚುವರಿ ರಿಯಾಯಿತಿಗಳಿಗೆ ಅನುಮತಿ ಇಲ್ಲ ಎಂದು ರೈಲ್ವೆ ಮಂಡಳಿಯು ವಲಯ ರೈಲ್ವೆಗಳಿಗೆ ನಿರ್ದೇಶನ ನೀಡಿದೆ.
























