ಧರ್ಮಸ್ಥಳ ಪ್ರಕರಣ : 11 ದಿನ 16 ಗುಂಡಿ ಅಗೆದರೂ ಸಿಕ್ಕಿದ್ದು ಬರೀ ಕಲ್ಲುಮಣ್ಣು!

20 ಅಡಿ ಅಗಲ, 10 ಅಡಿ ಆಳಕ್ಕೆ ಗುಂಡಿ ತೋಡಿದರೂ ಸಿಕ್ಕಿಲ್ಲ ಯಾವುದೇ ಕುರುಹು

ಧರ್ಮಸ್ಥಳ: ಧರ್ಮಸ್ಥಳ ಶವಗಳನ್ನು ಹೂತಿಟ್ಟ ಪ್ರಕರಣದಲ್ಲಿ 11 ದಿನಗಳಿಂದ ದೂರುದಾರ ಮುಸುಕುಧಾರಿ ವ್ಯಕ್ತಿ ತೋರಿಸಿದ ಎಲ್ಲ ಸ್ಥಳಗಳನ್ನು ಅಗೆದರೂ ಯಾವುದೇ ಸಾಕ್ಷ್ಯಗಳು ಲಭ್ಯವಾಗಿಲ್ಲ. ಆದರೂ ದೂರುದಾರ ತೋರಿಸುವ ಎಲ್ಲ ಸ್ಥಳಗಳನ್ನು ಪರೀಶೀಲಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಭಾನುವಾರ ಕಾರ್ಯಾಚರಣೆ ಸ್ಥಗಿತ ಮಾಡಲಿರುವ ಎಸ್‌ಐಟಿ ಸೋಮವಾರ ಕಾರ್ಯಾಚರಣೆ ಮುಂದುವರಿಸಲಿದೆ.

11 ದಿನದಲ್ಲಿ 16ಕ್ಕೂ ಹೆಚ್ಚು ಜಾಗ ತೋರಿಸಿದ ಸ್ಥಳಗಳಲ್ಲಿ ಸಿಕ್ಕಿದ್ದು ಕಲ್ಲು, ಮಣ್ಣು, ಬಂಡೆಮಾತ್ರ. ಶನಿವಾರ ಸಹ ಮಳೆ ಮಧ್ಯೆ ಕಾಡಿಗೆ ಊಟ ತರಿಸಿಕೊಂಡು 7 ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಲಾಯಿತು. ಪಾಯಿಂಟ್ 16 ಹಾಗೂ 16(ಎ) ಎಂದು 2 ಜಾಗ ಸೇರಿ 20 ಅಡಿ ಅಗಲ 10 ಅಡಿ ಆಳ ತೋಡಿದರೂ ಕೂಡ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಇದರ ಮಧ್ಯೆ ಅನಾಮಿಕ ಜಾಗ ಬದಲಿಸುತ್ತಿರುವುದು ಕೂಡ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಡುತ್ತಿದೆ.





















































 
 

ಅನಾಮಿಕ ಶನಿವಾರ ತೋರಿಸಿದ ಜಾಗ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿತ್ತು. ಧರ್ಮಸ್ಥಳದ ಧಾರ್ಮಿಕ ಕ್ಷೇತ್ರದ ಬಾಹುಬಲಿ ಬೆಟ್ಟದ ರಸ್ತೆ ಪಕ್ಕದಲ್ಲೇ ಹೆಣ ಹೂತಿರುವುದಾಗಿ ಲೊಕೇಶನ್ ಮಾರ್ಕ್ ಮಾಡಿದ್ದಾನೆ. ಹಾವು-ಬಳುಕಿನ ಮೈಕಟ್ಟು ರಸ್ತೆಯಲ್ಲಿ ದಶಕಗಳ ಹಿಂದೆ ಹೂತ ಹೆಣದ ಜಾಗವನ್ನ ಅದೇ ಮರ ನಿಲ್ಸಿ ಅಂತ ಥಟ್ಟನೆ ಗಾಡಿ ನಿಲ್ಲಿಸಿ ತೋರಿಸಿದ್ದಾನೆ. ಮೊದಲ 10 ದಿನದ 15 ಜಾಗವೂ ಕಾಡಿನ ಪ್ರದೇಶ. ಆದರೆ ಮೊದಲ ಬಾರಿಗೆ ನಿತ್ಯ ಹಗಲಿರುಳು ನೂರಾರು ಗಾಡಿ ಓಡಾಡುವ ರೋಡ್ ಪಕ್ಕವೇ ಜಾಗ ತೋರಿಸಿದ್ದ. ಆದರೆ ಅಲ್ಲೂ ಏನು ಸಿಗಲಿಲ್ಲ.

ಒಟ್ಟಾರೆ, 11 ದಿನದಲ್ಲಿ 16 ಜಾಗ ಅಗೆದಿರುವ ಅಧಿಕಾರಿಗಳಿಗೆ ಅನಾಮಿಕ ಹೇಳಿದ ರೀತಿ ಒಂದು ತಲೆಗೂದಲೂ ಸಿಕ್ಕಿಲ್ಲ. ಹೀಗಾಗಿ, ಈತನ ನಡೆಯ ಮೇಲೆ ಅನುಮಾನ ಮೂಡಿದೆ. ಭಾನುವಾರ ಕಾರಣ ಎಸ್‌ಐಟಿ ಕಾರ್ಯಾಚರಣೆ ಸ್ಥಗಿತ ಮಾಡಲಾಗಿದೆ.

ಈ ನಡುವೆ ಧರ್ಮಸ್ಥಳದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಘಟನೆಗಳನ್ನು ಪ್ರತಿಭಟಿಸಿ ಧರ್ಮಸ್ಥಳ ಚಲೋ ಪಾದಯಾತ್ರೆ ನಡೆಸಲು ಕೆಲವರು ತೀರ್ಮಾನಿಸಿದ್ದಾರೆ. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಧರ್ಮಸ್ಥಳ ಶ್ರೇಷ್ಠ ಹಾಗೂ ಪವಿತ್ರವಾದ ಕ್ಷೇತ್ರ, ಹೀಗಾಗಿ ಧರ್ಮಸ್ಥಳದ ಜೊತೆ ನಾವು ಇದ್ದೇವೆ ಎಂದು ಗೌರಿಬಿದನೂರಿನ ಬಿಜೆಪಿ ಶಾಸಕ ಎಸ್‌.ಆರ್‌ ವಿಶ್ವನಾಥ್‌ ಹೇಳಿದ್ದಾರೆ.

ಧರ್ಮಸ್ಥಳ ಚಲೋ ನಡೆಸಲು ತೀರ್ಮಾನ

ಧರ್ಮಸ್ಥಳ ಮಂಜುನಾಥಸ್ವಾಮಿ ತುಂಬಾ ಪವರ್‌ಫುಲ್, ಮಂಜುನಾಥಸ್ವಾಮಿ ಮೇಲೆ ಅಣೆ ಮಾಡಲು ಹೆದರುತ್ತಾರೆ. ಅಂತಹ ಮಂಜುನಾಥನ ಸನ್ನಿಧಿ ಧರ್ಮಸ್ಥಳದ ಮೇಲೆ ವಿನಾಕಾರಣ ಅಪಪ್ರಚಾರ ಮಾಡಲಾಗುತ್ತಿದೆ. ಹಾಗಾಗಿ ಆಗಸ್ಟ್ 16ರಂದು ಯಲಹಂಕದಿಂದ ಧರ್ಮಸ್ಥಳಕ್ಕೆ ಬೃಹತ್‌ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. 200ಕ್ಕೂ ಹೆಚ್ಚು ಕಾರುಗಳ ಮೂಲಕ ʻಧರ್ಮಸ್ಥಳದೊಂದಿಗೆ ನಾವಿದ್ದೇವೆʼ ಎಂಬ ಘೋಷವಾಕ್ಯದೊಂದಿಗೆ ಕಾರುಗಳಿಗೆ ಕೇಸರಿ ಧ್ವಜ ಕಟ್ಟಿಕೊಂಡು ಧರ್ಮಸ್ಥಳಕ್ಕೆ ತೆರಳಲಿದ್ದೇವೆ. ಅಲ್ಲಿ ದೇವರ ದರ್ಶನ ಪಡೆದು ವಾಪಾಸ್ ಬರಲಿದ್ದೇವೆ. ನಮ್ಮ ನಂತರ ರಾಜ್ಯದ ಇತರ ಕ್ಷೇತ್ರಗಳಿಂದಲೂ ಈ ಆಭಿಯಾನ ಆರಂಭವಾಗಲಿದೆ ಎಂದು ಹೇಳಿದರು.

ಅತ್ಯಾಚಾರ ಹಾಗೂ ಕೊಲೆಯಾದವರನ್ನ ನಾನು ಹೂತು ಹಾಕಿದ್ದೇನೆ ಎಂಬ ಅನಾಮಿಕನ ಹೇಳಿಕೆ ನೋಡಿದರೆ ಅವನನ್ನೇ ಮೊದಲು ಗಲ್ಲಿಗೇರಿಸಬೇಕು. ಅತ್ಯಾಚಾರ ಕೊಲೆ ಆಗಿರೋದು ಗೊತ್ತಿದ್ದೂ ಹೂತು ಹಾಕಿದರೆ ಆತ ಕೂಡ ಆರೋಪಿಯೇ. ಹಾಗಾಗಿ ಮೊದಲು ಆತನನ್ನ ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದರು.

error: Content is protected !!
Scroll to Top