ಕನ್ನಡದಲ್ಲೇ ಟ್ವೀಟ್ ಮಾಡಿ ಬೆಂಗಳೂರಿಗೆ ಬರುತ್ತಿರುವುದಾಗಿ ಕನ್ನಡಿಗರಿಗೆ ತಿಳಿಸಿದ ಪ್ರಧಾನಿ
ಬೆಂಗಳೂರು: ಮಟ್ರೊ ಯೆಲ್ಲೊ ಲೈನ್ಗೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಇಂದು (ಆಗಸ್ಟ್ 10) ಬೆಂಗಳೂರಿಗೆ ಆಗಮಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ರಾಗಿಗುಡ್ಡ ಮೆಟ್ರೊ ನಿಲ್ದಾಣದಲ್ಲಿ ಹಳದಿ ಮಾರ್ಗಕ್ಕೆ ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಹಳದಿ ಮಾರ್ಗದ ರಾಗಿಗುಡ್ಡ ಮೆಟ್ರೊ ನಿಲ್ದಾಣವನ್ನು ವಿದ್ಯುತ್ ದೀಪ, ಹೂಗಳಿಂದ ಭರ್ಜರಿಯಾಗಿ ಅಲಂಕರಿಸಲಾಗಿದೆ.
ಪ್ರಧಾನಿ ಮೋದಿಯವರು ತಾವು ರಾಜ್ಯಕ್ಕೆ ಬರುವ ವಿಚಾರವನ್ನು ಕನ್ನಡದಲ್ಲೇ ಟ್ವೀಟ್ ಮಾಡಿ ತಿಳಿಸಿದ್ದಾರೆ. ಆಗಸ್ಟ್ 10ರಂದು ಬೆಂಗಳೂರಿನ ಜನರೊಂದಿಗೆ ಇರಲು ಎದುರು ನೋಡುತ್ತಿದ್ದೇನೆ. ಸಂಪರ್ಕವನ್ನು ಸುಧಾರಿಸುವ ಮೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ ಕೆಎಸ್ಆರ್ ರೈಲು ನಿಲ್ದಾಣದಿಂದ ಹಸಿರು ನಿಶಾನೆ ತೋರಿಸಲಾಗುವುದು. ಬೆಂಗಳೂರು ನಗರದ ಮೂಲಸೌಕರ್ಯವನ್ನು ಹೆಚ್ಚಿಸಲು, ಬೆಂಗಳೂರು ಮೆಟ್ರೋದ ಹಳದಿ ಮಾರ್ಗವನ್ನು ಉದ್ಘಾಟಿಸಲಾಗುವುದು. ಬೆಂಗಳೂರು ಮೆಟ್ರೋದ ಮೂರನೇ ಹಂತಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ನಗರದಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಾಗುವುದು ಎಂದು ಟ್ವೀಟ್ ಮಾಡಿದ್ದಾರೆ.
ಇಂದು ಬೆಳಗ್ಗೆ 7.50ಕ್ಕೆ ದಿಲ್ಲಿಯಿಂದ ವಿಮಾನ ಮೂಲಕ ನಮೋ ಬೆಂಗಳೂರಿನತ್ತ ಹೊರಟು ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಎಚ್ಎಎಲ್ ತಲುಪಲಿದ್ದಾರೆ. 10.35ಕ್ಕೆ ಎಚ್ಎಎಲ್ ಏರ್ಪೋಋಟ್ನಿಂದ ಹೆಲಿಕಾಪ್ಟರ್ ಮೂಲಕ ಮೇಖ್ರಿ ವೃತ್ತ ಬಳಿ ಇರುವ ಏರ್ಫೋರ್ಸ್ ಕಮಾಂಡೊ ತರಬೇತಿ ಕೇಂದ್ರಕ್ಕೆ ಆಗಮನ. ಬೆಳಗ್ಗೆ 11ಕ್ಕೆ ರಸ್ತೆ ಮೂಲಕ ಹೊರಟು 11.10ಕ್ಕೆ ಕೆಎಸ್ಆರ್ ಬೆಂಗಳೂರು ರೈಲ್ವೆ ನಿಲ್ದಾಣ ತಲುಪಲಿದ್ದಾರೆ.
ಇಂದು ಮೋದಿಯವರು ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ನಗರದಲೊಇ ಸಂಚಾರ ವ್ಯತ್ಯಯವಾಗಲಿದ್ದು, ಕೆಲವೆಡೆ ಸಂಚಾರ ನಿರ್ಬಂಧ ಹೇರಲಾಗಿದೆ. ಹಲವು ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಿ ಪರ್ಯಾಯ ಮಾರ್ಗಗಳನ್ನು ಪೊಲೀಸರು ಸೂಚಿಸಿದ್ದಾರೆ.
























