ಸಹೋದರತೆಯ ‌ಸವಿಯನ್ನು ಸಾರುವ ಸುಂದರ ಆಚರಣೆಯೇ ‌ರಕ್ಷಾ ಬಂಧನ

ಇಂದು ಪವಿತ್ರ ರಕ್ಷಾ ಬಂಧನ ದಿನ

ರಕ್ಷಾ ಬಂಧನ, ಸಹೋದರತ್ವದ ಮಹತ್ವ ಸಾರುವ ಈ ಹಬ್ಬ ಭಾರತದಲ್ಲಿ ಬಹಳಷ್ಟು ಮಹತ್ವ ಪಡೆದ ಹಬ್ಬ ಎನ್ನುವುದರಲ್ಲಿ ‌ಎರಡು ಮಾತಿಲ್ಲ. ಇದು ಸಹೋದರ – ಸಹೋದರಿಯ ನಡುವಿನ ಸಂಬಂಧವನ್ನು ಗೌರವಿಸುವ ಹಬ್ಬ ಎನ್ನಬಹುದು.

ಸಹೋದರಿ ಸಹೋದರನಿಗೆ ತನ್ನ ರಕ್ಷಣೆಯ ಜವಾಬ್ದಾರಿ ಹೊರುವಂತೆ, ಎಲ್ಲ ಸಂದರ್ಭದಲ್ಲಿಯೂ ತನ್ನನ್ನು ರಕ್ಷಿಸುವಂತೆ ರಕ್ಷೆಯನ್ನು ಕಟ್ಟುತ್ತಾಳೆ. ಸಹೋದರ ತನ್ನ ಸಹೋದರಿಯ ರಕ್ಷಣೆಯ ಭಾರ ತನ್ನದು ಎನ್ನುವ ಪ್ರತಿಜ್ಞೆ ಮಾಡುತ್ತಾನೆ ಎನ್ನುವುದು ಈ ಸುಂದರ ದಿನದ ಹಿಂದಿನ ತಿರುಳು.





















































 
 

ಪೌರಾಣಿಕ ಕಥೆಗಳು

ಪುರಾಣ ಕಥೆಗಳಲ್ಲಿಯೂ ನಾವು ರಕ್ಷಾ ಬಂಧನದ ಮಹತ್ವವನ್ನು, ಬೇರನ್ನು ನಾವು ಗಮನಿಸಬಹುದು. ಮಹಾಭಾರತದ ಸಂದರ್ಭದಲ್ಲಿ ಸುದರ್ಶನ ಚಕ್ರವನ್ನು ಬಳಸಿ ಶಿಶುಪಾಲನನ್ನು ಶ್ರೀಕೃಷ್ಣ ವಧಿಸುತ್ತಾನೆ. ಈ ವೇಳೆ ಶ್ರೀಕೃಷ್ಣನ ಬೆರಳಿಗೆ ಗಾಯವಾಗುತ್ತದೆ. ರಕ್ತ ಸುರಿಯುತ್ತದೆ. ಆಗ ದ್ರೌಪದಿ ಬಟ್ಟೆಯ ತುಂಡನ್ನು ಮಾಧವನ ಬೆರಳಿಗೆ ಕಟ್ಟುತ್ತಾಳೆ. ರಕ್ತ ಸುರಿಯುವುದನ್ನು ತಡೆಯುತ್ತಾಳೆ. ಆಗ ಶ್ರೀಕೃಷ್ಣನು ನನ್ನ ಸಹೋದರಿಯಾದ ನಿನ್ನ ಪ್ರತಿ ಕಷ್ಟ, ನೋವಿನ ಸಮಯದಲ್ಲೂ ನಿನ್ನ ನೆರವಿಗೆ, ರಕ್ಷಣೆಗೆ ನಾನು ಬರುವುದಾಗಿ ಭರವಸೆ ನೀಡುತ್ತಾನೆ. ಇದೇ ಸಂದೇಶದ ಜೊತೆಗೆ ಇಂದೂ ಸಹ ರಕ್ಷಾ ಬಂಧನ ಆಚರಿಸಲ್ಪಡುತ್ತಿದೆ ಎನ್ನುವುದು ಸಂತೋಷದ ಸಂಗತಿ.

ರಕ್ಷೆಯನ್ನು ಕೇವಲ ಒಡಹುಟ್ಟಿದ ಸಹೋದರನಿಗೆ ಮಾತ್ರವೇ ಕಟ್ಟಬೇಕು ಎಂಬ ನಿಯಮವಿಲ್ಲ. ಬದಲಾಗಿ ಯಾರನ್ನು ಸಹೋದರ ಎಂದು ಭಾವಿಸಿರುತ್ತೇವೆಯೋ ಅವರೆಲ್ಲರಿಗೂ ರಕ್ಷೆಯನ್ನು ಕಟ್ಟಿ ರಕ್ಷಾ ಬಂಧನವನ್ನು ಆಚರಿಸಬಹುದು.

ಪ್ರಸ್ತುತ ದಿನಮಾನಗಳಲ್ಲಿ ಪ್ರಧಾನಿ ಮೋದಿ ಅವರಿಗೆ ವಿದೇಶದಿಂದ ರಕ್ಷೆ ಕಳುಹಿಸುವ ಸಹೋದರಿಯರನ್ನು ಕಾಣಬಹುದು. ಮಾತ್ರವಲ್ಲದೆ ಯೋಧರಿಗೆ, ಪೊಲೀಸರಿಗೆ, ವೈದ್ಯರಿಗೆ, ಪೌರ‌ಕಾರ್ಮಿಕರಿಗೆ ಹೀಗೆ ಎಲ್ಲಾ ಕ್ಷೇತ್ರಗಳಿಗೆ ಸಂಬಂಧಿಸಿದ ಜನರಿಗೂ ರಕ್ಷೆ ಕಟ್ಟುವುದನ್ನು ಕಾಣಬಹುದು. ದೇಶವನ್ನು ಕಾಯುವವರು ಮತ್ತು ದೇಹದ, ಮನಸ್ಸಿನ ಆರೋಗ್ಯಕ್ಕೆ ಪೂರಕವಾದ ಪರಿಸರ ನಿರ್ಮಾಣ ಮಾಡುವವರಲ್ಲಿ ಸಹೋದರತ್ವದ ಬಂಧವನ್ನು ಕಾಣುವ, ನಮ್ಮನ್ನು ರಕ್ಷಿಸುವವರನ್ನು ಸಹೋದರರು ಎಂದು ಭಾವಿಸಿ ರಕ್ಷೆ ಕಟ್ಟುವ ಸುಂದರ ಆಚರಣೆ ಎಷ್ಟು ಅರ್ಥಪೂರ್ಣ ಅಲ್ಲವೇ.

ರಕ್ಷೆಗಳು

ಪ್ರಸ್ತುತ ದಿನಗಳಲ್ಲಿ ರಕ್ಷೆಯನ್ನು ಪೋಸ್ಟ್ ಮೂಲಕ ಕಳುಹಿಸುವ ವ್ಯವಸ್ಥೆಯೂ ಇದೆ. ಕೊರಿಯರ್ ವ್ಯವಸ್ಥೆ ಸಹ ನಮಗೆ ಲಭ್ಯ.

ಇಂದು ನಾವು ತರಹೇವಾರಿ, ಭಿನ್ನ ವಿಭಿನ್ನ ರೀತಿಯ ರಕ್ಷೆಗಳನ್ನು ಮಾರುಕಟ್ಟೆಗಳಲ್ಲಿ ಕಾಣಬಹುದು. ಆನ್‌ಲೈನ್ ಮೂಲಕವೂ ನಮಗೆ ಸುಂದರ ರಕ್ಷೆಗಳು ಮನೆ ಬಾಗಿಲಿಗೆ ಬಂದು ತಲುಪುವ ವ್ಯವಸ್ಥೆ ಇದೆ. ಬೆಳ್ಳಿ ಮತ್ತು ಚಿನ್ನದ ರಕ್ಷೆಗಳನ್ನು ಕಟ್ಟುವ ಸಿರಿವಂತರೂ ನಮ್ಮಲ್ಲಿದ್ದಾರೆ. ನಾವು ಎಷ್ಟು ಮೌಲ್ಯದ ರಕ್ಷೆ ಕಟ್ಟುತ್ತೇವೆ ಎನ್ನುವುದು ಮುಖ್ಯವಲ್ಲ. ಆದರೆ ನಾವು ಕಟ್ಟುವ ರಕ್ಷೆಯಲ್ಲಿ ಎಷ್ಟು ಪ್ರೀತಿ ಇಟ್ಟಿದ್ದೇವೆ, ರಕ್ಷೆ ಕಟ್ಟುವವರ ಮೇಲೆ ಎಷ್ಟು ನಂಬಿಕೆ ಇರಿಸಿದ್ದೇವೆ ಎನ್ನುವುದು ಮುಖ್ಯ. ಸಹೋದರನ ಮೇಲೆ ನಾವೆಷ್ಟು ಕಾಳಜಿ ಇರಿಸಿದ್ದೇವೆ, ನಮ್ಮ ಕಷ್ಟದಲ್ಲಿ ಅವರು ನಮಗೆ ಎಷ್ಟು ಜೊತೆಯಾಗಿ ನಿಲ್ಲುತ್ತಾರೆ ಎನ್ನುವುದು ಮುಖ್ಯ.

ರಕ್ಷೆ ಸಹೋದರತ್ವದ ಸಂಕೇತ
ರಕ್ಷೆ ಸ್ನೇಹದ ಸಂಕೇತ
ರಕ್ಷೆ ಸಹಕಾರದ ಸಂಕೇತ
ರಕ್ಷೆ ಸ್ವಾಭಿಮಾನದ ಸಂಕೇತ
ರಕ್ಷೆ ಧರಿಸೋಣ – ಸಹೋದರತ್ವದ ಸವಿ ಉಣ್ಣೋಣ

ಎಲ್ಲರಿಗೂ ರಕ್ಷಾ ಬಂಧನದ ಶುಭಾಶಯಗಳು

ಭುವನ ಬಾಬು ಪುತ್ತೂರು

error: Content is protected !!
Scroll to Top