ಬೆಂಗಳೂರು: ಇಡೀ ದೇಶವನ್ನೇ ತನ್ನತ್ತ ಸೆಳೆದಿರುವ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಸುದ್ದಿ ಮಾಡಲು ಹೋದ ಯೂಟ್ಯೂಬರ್ಸ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದ ಹೀಗೆ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ.
ಯಾರೇ ತಪ್ಪು ಮಾಡಿರಲಿ, ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಕಾನೂನು ಎಲ್ಲರಿಗೂ ಒಂದೇ. ಧರ್ಮಸ್ಥಳದಲ್ಲಿ ಯೂಟ್ಯೂಬರ್ಸ್ ಮೇಲೆ ನಡೆದಿರುವ ಹಲ್ಲೆಯ ಬಗ್ಗೆ ಎಲ್ಲಾ ರೀತಿಯ ಮಾಹಿತಿ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಧರ್ಮಸ್ಥಳ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಹಸ್ತಕ್ಷೇಪ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗೆಯೇ ಈ ರೀತಿ ಗಲಭೆ ಯಾತಕ್ಕಾಗಿ ನಡೆಯುತ್ತಿದೆ ಎಂದೇ ಅರ್ಥವಾಗುತ್ತಿಲ್ಲ. ಜನರ ಆಗ್ರಹದನ್ವಯ SIT ರಚಿಸಿದ್ದೇವೆ. ಒಬ್ಬ ವ್ಯಕ್ತಿ ಅಲ್ಲಿ ಹಲವಾರು ಹೆಣಗಳನ್ನು ಹೂತಿದ್ದಾಗಿ ತಿಳಿಸಿದ್ದಾನೆ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದಿದ್ದಾರೆ.
ನಿನ್ನೆ ನಡೆದ ಗಲಾಟೆಗೆ ಸಂಬಂಧಿಸಿದ ಹಾಗೆ ಎರಡೂ ಕಡೆಯಿಂದ ದೂರುಗಳು ಬಂದಿವೆ. ಪೊಲೀಸರು ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುತ್ತಾರೆ. ಯಾರು ಏನು ಹೇಳಿಕೆ ಕೊಡುತ್ತಾರೆ ಎನ್ನುವುದಕ್ಕಿಂತ ಸತ್ಯ ಹೊರಬರುವುದಷ್ಟೇ ಮುಖ್ಯ ಎಂದು ಗೃಹ ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
























