ಪೊಲೀಸರ ಸೋಗಿನಲ್ಲಿ ಕರೆ ಮಾಡಿ ಹೆದರಿಸಿದ್ದ ವಂಚಕರು
ಬೆಂಗಳೂರು: ಸೈಬರ್ ಚೋರರು ವೃದ್ಧರೊಬ್ಬರನ್ನು ಒಂದು ವಾರ ಡಿಜಿಟಲ್ ಟರೆಸ್ಟ್ ಮಾಡಿ ಬರೋಬ್ಬರಿ 1.77 ಕೋಟಿ ರೂ. ಎಗರಿಸಿದ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ. ಪೊಲೀಸರ ಸೋಗಿನಲ್ಲಿ ವೃದ್ಧರನ್ನು ಒಂದು ವಾರ ಡಿಜಿಟಲ್ ಬಂಧನದಲ್ಲಿಟ್ಟಿದ್ದರು. ಸೈಬರ್ ವಂಚನೆಗೆ ಒಳಗಾದ ಜಿ.ವಸಂತ್‌ಕುಮಾರ್ (81) ಎಂಬುವರು ಪೂರ್ವ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸದಾನಂದ ನಗರ ಬಳಿಯ ಎನ್‌ಜಿಇಎಫ್ ಲೇಔಟ್ ನಿವಾಸಿಯಾದ ವಸಂತ್‌ಕುಮಾರ್ ಅವರಿಗೆ ಸಂದೀಪ್ ಜಾಧವ್ ಎಂಬಾತ ಜುಲೈ 5ರಂದು ಮುಂಬೈನ ಕೊಲಾಬ ಪೊಲೀಸರ ಹೆಸರಿನಲ್ಲಿ ಕರೆ ಮಾಡಿ ಬೆದರಿಸಿದ್ದ. ವಂಚಕ ಸಂದೀಪ್, ತಮ್ಮ ಆಧಾರ್ ಸಂಖ್ಯೆ ಬಳಸಿಕೊಂಡು ಬ್ಯಾಂಕ್ ಖಾತೆ ತೆರೆಯಲಾಗಿದೆ. ಜೆಟ್ ಏರ್‌ವೇಸ್‌ನ ನರೇಶ್ ಗೋಯಲ್ ಎಂಬಾತನ ಹೆಸರಿಗೆ ತಮ್ಮ ಬ್ಯಾಂಕ್ ಖಾತೆಯಿಂದ ಹಣದ ಅಕ್ರಮ ವರ್ಗಾವಣೆಯಾಗಿದೆ ಎಂದು ವಸಂತ್‌ಕುಮಾರ್ ಅವರಿಗೆ ಹೆದರಿಸಿದ್ದ.
ಬಳಿಕ ಕೆಲ ವ್ಯಕ್ತಿಗಳು ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ವಸಂತ್‌ಕುಮಾರ್ ಅವರಿಗೆ ಕರೆ ಮಾಡಿ, ಜುಲೈ 9ರಿಂದ 15ರವರೆಗೆ ಡಿಜಿಟಲ್ ಅರೆಸ್ಟ್ ಮಾಡಿದ್ದರು. ಅಲ್ಲದೆ, ವಾಟ್ಸಾಪ್ ವಿಡಿಯೋ ಕರೆಯ ಮೂಲಕ ನಕಲಿ ಬಂಧನದ ವಾರಂಟ್ ತೋರಿಸಿ ಬೆದರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧನದ ವಾರಂಟ್ ನೋಡಿ ಭಯಬಿದ್ದ ವಸಂತ್‌ಕುಮಾರ್ ತಮ್ಮ ಬ್ಯಾಂಕ್ ಖಾತೆಯ ವಿವರವನ್ನು ವಂಚಕರಿಗೆ ಕೊಟ್ಟಿದ್ದರು. ನಂತರ ವಂಚಕರು, ತನಿಖೆ ಉದ್ದೇಶಕ್ಕೆ ತಮ್ಮ ಖಾತೆಯಲ್ಲಿನ ಹಣವನ್ನು ಬೇರೊಂದು ಖಾತೆಗೆ ವರ್ಗಾಯಿಸಬೇಕೆಂದು ವಸಂತ್‌ಕುಮಾರ್‌ಗೆ ಸೂಚಿಸಿದ್ದರು. ಹೀಗಾಗಿ, ವಸಂತ್‌ಕುಮಾರ್ ತಮ್ಮ ಬ್ಯಾಂಕ್ ಖಾತೆಯಿಂದ ವಂಚಕರು ಸೂಚಿಸಿದ ಖಾತೆಗಳಿಗೆ ಹಂತಹಂತವಾಗಿ ಆರ್‌ಟಿಜಿಎಸ್ ಮೂಲಕ 1.77 ಕೋಟಿ ರೂ. ವರ್ಗಾಯಿಸಿದ್ದರು. ಬಳಿಕ ವಂಚಕರು ಅವರ ಸಂಪರ್ಕಕ್ಕೆ ಸಿಗದೆ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ. ಅಲ್ಲದೆ, ಹಣವನ್ನು ಖಾತೆಗೆ ವಾಪಸ್ ಹಾಕಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಂಚಕರ ಮೋಸ ಗೊತ್ತಾಗಿ ವಸಂತ್‌ಕುಮಾರ್ ಅವರು ದೂರು ಕೊಟ್ಟಿದ್ದು, ವಂಚಕರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮತ್ತು ಹಣ ವಾಪಸ್ ಕೊಡಿಸುವಂತೆ ಕೋರಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
























