ಕ್ಷೇತ್ರಕ್ಕೆ ಅವಮಾನ ಮಾಡುತ್ತಿರುವವರ ವಿರುದ್ಧ ಸಿಡಿದ ಧರ್ಮಸ್ಥಳ ಗ್ರಾಮಸ್ಥರು
ಮಂಗಳೂರು: ಬುಧವಾರ ನಡೆದ ಹಲ್ಲೆ, ಘರ್ಷಣೆಯ ಅಹಿತಕರ ಘಟನೆಯ ಬಳಿಕ ಧರ್ಮಸ್ಥಳದ ಪರಿಸ್ಥಿತಿ ಪ್ರಕ್ಷುಬ್ಧಗೊಂಡಿದ್ದು, ಇದರ ನಡುವೆಯೇ ಇಂದು ಅತಿ ಮಹತ್ವದ್ದು ಎನ್ನಲಾಗಿರುವ 13ನೇ ಪಾಯಿಂಟ್ನಲ್ಲಿ ಅಗೆತ ಕಾರ್ಯಾಚರಣೆ ನಡೆಯಲಿದೆ.
ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣದ ಉತ್ಖನನ ಕಾರ್ಯ ಕೊನೆಯ ಹಂತಕ್ಕೆ ಬಂದು ನಿಂತಿದೆ. ಈ ನಡುವೆ ಕೊನೆಯ ಪಾಯಿಂಟ್ ಆಗಿರುವ 13ನೇ ಜಾಗದ ಉತ್ಖನನ ವಿಶೇಷ ತನಿಖಾ ತಂಡ ಕಗ್ಗಂಟಾಗಿದೆ.
ದೂರುದಾರ ಮುಸುಕುಧಾರಿ ತೋರಿಸಿದ 13 ಕಡೆಗಳಲ್ಲಿ ಭೂಮಿ ಅಗೆದು ಹುಡುಕಿದರೂ ಪಾಯಿಂಟ್ ಸಂಖ್ಯೆ 6 ಹೊರತುಪಡಿಸಿ ಬೇರೆ ಕಡೆ ಏನೂ ಸಿಗಲಿಲ್ಲ. ನೂರಾರು ಶವ ಹೂತಿಟ್ಟಿದ್ದೇನೆ ಎಂದಿದ್ದ ದೂರುದಾರ ಪಾಯಿಂಟ್ ನಂಬರ್ 13ರಲ್ಲಿ ರಾಶಿ ರಾಶಿ ಹೆಣಗಳಿವೆ ಎಂದು ಹೇಳಿದ್ದಾನೆ. ಈ ಕಾರಣಕ್ಕೆ ಸಾಕಷ್ಟು ಉದ್ದ ಅಗಲಕ್ಕೆ ಮಾರ್ಕ್ ಮಾಡಲಾಗಿದೆ. ಅದರೆ ಈ ಪಾಯಿಂಟ್ ಎಸ್ಐಟಿ ಅಧಿಕಾರಿಗಳಿಗೆ ಕಗ್ಗಂಟಾಗಿದೆ.

ಬುಧವಾರ ಉತ್ಖನನ ಮಾಡಿ ಮುಗಿಸಬೇಕಿದ್ದ ಈ 13ನೇ ಪಾಯಿಂಟ್ ಅಗೆಯದೇ 14ನೇ ಪಾಯಿಂಟ್ ಉತ್ಖನನ ನಡೆಸಿದ್ದರು. ಈ 13ನೇ ಪಾಯಿಂಟ್ನ ಮಧ್ಯಭಾಗದಲ್ಲೇ ಎರಡು ವಿದ್ಯುತ್ ಕಂಬಗಳಿವೆ. ಪಕ್ಕದಲ್ಲೇ ನೇತ್ರಾವತಿ ನದಿಗೆ ಕಟ್ಟಲಾದ ಸಣ್ಣ ಅಣೆಕಟ್ಟು ಇದೆ. ಪಾಯಿಂಟ್ ಪಕ್ಕದಲ್ಲೇ ಸಾರ್ವಜನಿಕ ರಸ್ತೆ ಇದೆ. ಈ ಎಲ್ಲ ಸವಾಲು ಸರಿಪಡಿಸಲು ಒಂದು ದಿನ ಉತ್ಖನನವನ್ನು ಮುಂದೂಡಿದ್ದರು.
ಧರ್ಮಸ್ಥಳ ಗ್ರಾಮ ಪಂಚಾಯತ್, ನೀರಾವರಿ ಇಲಾಖೆ, ಮೆಸ್ಕಾಂ ಇಲಾಖೆ ಜೊತೆ ಅಧಿಕಾರಿಗಳು ಸಮಾಲೋಚನೆ ನಡೆಸಿದ್ದಾರೆ. ಕಿರು ಅಣೆಕಟ್ಟು ಪಕ್ಕದಲ್ಲಿ ನೆಲ ಅಗೆಯುವುದು ಹೇಗೆ? ವಿದ್ಯುತ್ ಕಂಬಗಳಿರುವ ಜಾಗದಲ್ಲಿ ಏನ್ ಮಾಡಬೇಕು ಎಂಬ ಬಗ್ಗೆ ತಜ್ಞರ ಅಭಿಪ್ರಾಯವನ್ನು ಎಸ್ಐಟಿ ಅಧಿಕಾರಿಗಳು ಸಂಗ್ರಹಿಸಿ ಇಂದು ಉತ್ಖನನ ನಡೆಸಲು ಎಸ್ಐಟಿ ಅಧಿಕಾರಿಗಳು ತಯಾರಿ ನಡೆಸಿದ್ದಾರೆ.
ಮುಸುಕುಧಾರಿ ವಿರುದ್ಧ ಹೆಚ್ಚಾದ ಅನುಮಾನ
13 ಕಡೆ ಭೂಮಿ ಅಗೆದರೂ ಏನೂ ಸಿಗದೆ ಇರುವ ಕಾರಣ ಮುಸುಕುಧಾರಿ ಹೇಳುತ್ತಿರುವುದು ಸುಳ್ಳಾ ಎಂಬ ಪ್ರಶ್ನೆಯೂ ಎದ್ದಿದೆ. ಆತ ಹೇಳಿದ ಯಾವ ಪಾಯಿಂಟ್ನಲ್ಲೂ ಕಳೇಬರ ಸಿಗದೆ ಇದ್ದು ಹೊಸ ದಿಕ್ಕಿನಲ್ಲೂ ಹುಡುಕಿದರೂ ಯಾವುದೇ ಕುರುಹುಗಳು ಸಿಕ್ಕಿಲ್ಲ. ಹೀಗಾಗಿ ಮುಸುಕುಧಾರಿ ಅನಾಮಿಕನ ವಿರುದ್ಧ ಅನುಮಾನ ದಟ್ಟವಾಗುತ್ತಿದೆ.
ದಿನದಿಂದ ದಿನಕ್ಕೆ ಕುತೂಹಲ ಹುಟ್ಟಿಸಿದ ಈ ತಲೆ ಬುರುಡೆ ಕಥೆಯನ್ನು ಅನಾಮಿಕ ವ್ಯಕ್ತಿ ಬುರುಡೆ ಬಿಟ್ಟಿದ್ದಾನಾ ಎಂಬ ಮಾತುಗಳು ಈಗ ಹರಿದಾಡಲು ಆರಂಭವಾಗಿದೆ. ಆತ ಎಸ್ಐಟಿ ಸೇರಿದಂತೆ ಎಲ್ಲರ ದಿಕ್ಕು ತಪ್ಪಿಸಿದ್ದಾನಾ ಎಂಬ ಅನುಮಾನವೂ ಹೆಚ್ಚಾಗಿದೆ.

ಸಿಡಿದೆದ್ದ ಗ್ರಾಮಸ್ಥರು
ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಧರ್ಮಸ್ಥಳ ಕ್ಷೇತ್ರಕ್ಕೆ ನಿರಂತರ ಅವಮಾನ ಮಾಡುತ್ತಿರುವುದರ ವಿರುದ್ಧ ಕ್ಷೇತ್ರದ ಭಕ್ತರ ಅಸಮಾಧಾನ ತೀವ್ರಗೊಳ್ಳುತ್ತಿದ್ದು, ನಿನ್ನೆ ಯೂಟ್ಯೂಬರ್ಗಳ ಮೇಲೆ ಹಲ್ಲೆ ಮತ್ತು ಪ್ರತಿಭಟನೆಯತ್ತ ತಿರುಗಿದೆ.
ನಿನ್ನೆ ರಾತ್ರಿ ಧರ್ಮಸ್ಥಳದ ಸಾವಿರಾರು ಗ್ರಾಮಸ್ಥರು ಧರ್ಮಸ್ಥಳ ಠಾಣೆಗೆ ಮುತ್ತಿಗೆ ಹಾಕಿ ನ್ಯಾಯ ಕೊಡಬೇಕು ಎಂದು ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೇ ಕ್ಷೇತ್ರ ಬಗ್ಗೆ ಅಪಪ್ರಚಾರ ನಡೆಸಿದ್ದಕ್ಕೆ ಪಾಂಗಳ ಎಂಬಲ್ಲಿ ಮೂವರು ಯೂಟ್ಯೂಬರ್ ಮೇಲೆ ಹಲ್ಲೆ ನಡೆಸಿದ್ದಾರೆ. ಎರಡು ಗುಂಪುಗಳ ಮಧ್ಯೆ ಕಿತ್ತಾಟ ನಡೆಯುತ್ತಿದ್ದಂತೆ ಪೊಲೀಸರು ಲಾಠಿ ಚಾರ್ಜ್ ಮಾಡಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.
ಧರ್ಮಸ್ಥಳ ಬುರುಡೆ ರಹಸ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ನಡೆಸುತ್ತಿರುವ ತನಿಖೆಗೆ ಗ್ರಾಮಸ್ಥರು ಸಂಪೂರ್ಣ ಸಹಕಾರ ನೀಡಿದ್ದರು. ಈ ಮಧ್ಯೆ 6ನೇ ಜಾಗದಲ್ಲಿ ಅಸ್ಥಿ ಸಿಕ್ಕಿದ ನಂತರ ಕೆಲ ಯೂಟ್ಯೂಬ್ ವಾಹಿನಿಗಳು ಸುಳ್ಳು ಸುದ್ದಿಗಳನ್ನು ಪ್ರಚಾರ ನಡೆಸಲು ಆರಂಭಿಸಿದವು.
5-6 ವ್ಯಕ್ತಿಗಳ ದೇಹ ಸಿಕ್ಕಿವೆ. ಮಹಿಳೆಯರ ಮೂಳೆಗಳು ಸಿಕ್ಕಿವೆ ಎಂದು ಅಪ್ರಚಾರ ನಡೆಸಲು ಆರಂಭಿಸಿದವು. ಸೋಮವಾರ ಅರಣ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಮೂಳೆಗಳು ಪತ್ತೆಯಾಗಿದ್ದವು. ಇದು ಬೆಳಕಿಗೆ ಬರುತ್ತಿದ್ದಂತೆ ಧರ್ಮಸ್ಥಳ ಗ್ರಾಮಸ್ಥರೇ ವ್ಯಕ್ತಿಯನ್ನು ಕೊಲೆ ಮಾಡಿದ್ದಾರೆ ಎಂದು ಕೆಲ ಯೂಟ್ಯೂಬರ್ಗಳು ಸುದ್ದಿ ಮಾಡಿದ್ದರು. ತಮ್ಮ ಎಲ್ಲಾ ಸುದ್ದಿಗಳಿಗೆ ಎಸ್ಐಟಿ ಖಚಿತ ಮೂಲಗಳು ಎಂದು ಹೇಳುತ್ತಿದ್ದರು.
ಯೂಟ್ಯೂಬರ್ಗಳಿಂದ ನಿರಂತರ ಅಪಪ್ರಚಾರ
ರಾಜ್ಯಮಟ್ಟದ ಮಾಧ್ಯಮಗಳಲ್ಲಿ ತನಿಖೆಗೆ ಸಂಬಂಧಿಸಿದ ಸುದ್ದಿಗಳು ಮಾತ್ರ ಬರುತ್ತಿದ್ದರೆ ಯೂಟ್ಯೂಬ್ ವಾಹಿನಿಗಳಲ್ಲಿ ಅದಕ್ಕೆ ವಿರುದ್ಧವಾದ ಸುದ್ದಿಗಳು ಪ್ರಕಟವಾಗುತ್ತಿದ್ದವು. ಅಷ್ಟೇ ಅಲ್ಲದೇ ಕ್ಷೇತ್ರದ ಬಗ್ಗೆ ಅವಹೇಳನ ಮಾಡಿ ಸುದ್ದಿ ಪ್ರಕಟವಾಗುತ್ತಿತ್ತು. ಇದು ಗೊಂದಲಕ್ಕೆ ಕಾರಣವಾಗುತ್ತಿತ್ತು. ನಿರಂತರ ದೇವಸ್ಥಾನ, ವೀರೇಂದ್ರ ಹೆಗಡೆ ಕುಟುಂಬದ ತೇಜೋವಧೆ, ಗ್ರಾಮಸ್ಥರ ಬಗ್ಗೆ ಅಪಪ್ರಚಾರ ಮಾಡುತ್ತಿರುವುದನ್ನು ಖಂಡಿಸಿ ಭಕ್ತರು ಸಿಡಿದು ನಿಂತಿದ್ದಾರೆ.
ಧರ್ಮಸ್ಥಳ ಕ್ಷೇತ್ರದ ಬಗ್ಗೆ ಕಳೆದ 13 ವರ್ಷಗಳಿಂದ ಅಪಪ್ರಚಾರ ನಡೆಯುತ್ತಿದೆ. ಈ ಅಪಪ್ರಚಾರಕ್ಕೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣನವರ್ ಕಾರಣ. ಇವರನ್ನು ಕೂಡಲೇ ಬಂಧಿಸಬೇಕು. ಸಮೀರ್ ಎಂಬಾತ ಯಾವುದೇ ಸಾಕ್ಷ್ಯ ಇಲ್ಲದೆ ಸುಳ್ಳು ವಿಡಿಯೋ ಮಾಡಿದ್ದಾನೆ. ಆತನ ವಿರುದ್ಧ ದೂರು ನೀಡಿದರೂ ಯಾವುದೇ ಕ್ರಮಕೈಗೊಂಡಿಲ್ಲ.
ಈಗ 12 ಸ್ಥಳಗಲ್ಲಿ ಶೋಧ ನಡೆಸಿದರೂ ಸರಿಯಾದ ಸಾಕ್ಷ್ಯ ಸಿಗಲಿಲ್ಲ. ಈ ಸಂದರ್ಭಲ್ಲಿ ಗಿರೀಶ್ ಮಟ್ಟಣನವರ್ ಪೊಲೀಸರ ವಿರುದ್ಧವೇ ಮಾತನಾಡುತ್ತಿದ್ದಾರೆ. ಹೀಗಾಗಿ ಇವರ ಜೊತೆ ಸುಳ್ಳು ಸುದ್ದಿಗಳನ್ನು ಹರಡುತ್ತಿರುವ ಯೂಟ್ಯೂಬರ್ಸ್ ವಿರುದ್ಧ ಕ್ರಮ ಕೈಗೊಳ್ಳಬೇಕು. ದಕ್ಷಿಣ ಕನ್ನಡ ಎಸ್ಪಿ, ಎಸ್ಐಟಿ ತಂಡ ಬರುವವರೆಗೂ ನಾವು ಸ್ಥಳದಿಂದ ಕದಲುವುದಿಲ್ಲ ಎಂದು ಕ್ಷೇತ್ರದ ಭಕ್ತರು ನಿನ್ನೆ ಧರ್ಮಸ್ಥಳ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
























