ಹೈಕೋರ್ಟ್‌ ಖಡಕ್‌ ವಾರ್ನಿಂಗ್‌ : ಒಂದೇ ದಿನದಲ್ಲಿ ಮುಗಿದ ಸಾರಿಗೆ ನೌಕರರ ಮುಷ್ಕರ

ಎಸ್ಮಾ ಕಾಯಿದೆಯಡಿ ಮುಷ್ಕರ ನಿರತ ನೌಕರರನ್ನು ಬಂಧಿಸಬಹುದು ಎಂದು ಎಚ್ಚರಿಕೆ ನೀಡಿದ ಹೈಕೋರ್ಟ್‌

ಬೆಂಗಳೂರು : ಕರ್ನಾಟಕ ಹೈಕೋರ್ಟ್ ಖಡಕ್​ ಎಚ್ಚರಿಕೆ ನೀಡಿದ ಬೆನ್ನಲ್ಲೇ ಸಾರಿಗೆ ನೌಕರರ ಮುಷ್ಕರ ಒಂದೇ ದಿನದಲ್ಲಿ ಮುಕ್ತಾಯವಾಗಿದ್ದು, ನಿನ್ನೆಯೇ ಬಸ್‌ಗಳು ರಸ್ತೆಗಿಳಿದಿವೆ. ಸಾರಿಗೆ ನೌಕರರು ಕೆಲಸಕ್ಕೆ ಹಾಜರಾಗಿದ್ದು, ರಾಜ್ಯಾದ್ಯಂತ ನಾಲ್ಕೂ ನಿಗಮಗಳ ಬಸ್​ ಸಂಚಾರ ಆರಂಭವಾಗಿವೆ. ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳು ಎಂದಿನಂತೆ ಓಡಾಟ ನಡೆಸಿವೆ.

38 ತಿಂಗಳ ಹಿಂಬಾಕಿ ಪಾವತಿ ಸಹಿತ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಆಗ್ರಹಿಸಿ ಸಾರಿಗೆ ಇಲಾಖೆ ನೌಕರರು ಮಂಗಳವಾರ ಮುಷ್ಕರ ಹೂಡಿದ್ದರು. ಇದರಿಂದ ನಾಲ್ಕೂ ನಿಗಮಗಳ ಬಸ್​ ಸಂಚಾರ ಸ್ಥಗಿತಗೊಂಡಿದ್ದವು.





















































 
 

ನಿಮ್ಮ ಸಮಸ್ಯೆಯನ್ನು ಸರ್ಕಾರದೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಿ. ಜನಸಾಮಾನ್ಯರನ್ನು ಒತ್ತೆಯಾಗಿರಿಸುವುದನ್ನು ಸಹಿಸುವುದಿಲ್ಲ. ಹೈಕೋರ್ಟ್ ಆದೇಶವಿದ್ದರೂ ನೀವು ಅದನ್ನು ಪಾಲಿಸಿಲ್ಲ. ಎಸ್ಮಾ ಕಾಯ್ದೆಯಡಿ ಸಂಘಟನೆಯ ಪದಾಧಿಕಾರಿಗಳನ್ನು ಬಂಧಿಸಬಹುದು ಎಂದು ಸಾರಿಗೆ ಸಂಘಟನೆಗೆ ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿತು. ಹೈಕೋರ್ಟ್​ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಸಾರಿಗೆ ನೌಕರರು ಮುಷ್ಕರವನ್ನು ಮುಂದೂಡಿ, ಕೆಲಸಕ್ಕೆ ಹಾಜರಾಗಿದ್ದಾರೆ.

ಹೈಕೋರ್ಟ್ ಖಡಕ್​ ಎಚ್ಚರಿಕೆ ನೀಡಿದ ಬೆನ್ನಲ್ಲೇ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್​ ಸಾರಿಗೆ ನೌಕರರ ಮುಷ್ಕರವನ್ನು ಮುಂದೂಡಿದ್ದೇವೆ ಎಂದು ಘೋಷಿಸಿದ್ದಾರೆ. ಒಂದು ದಿನ ಮುಷ್ಕರ ಮುಂದೂಡುವಂತೆ ಹೈಕೋರ್ಟ್​ ಸೂಚನೆ ನೀಡಿದ ನಂತರವೂ ಸಾರಿಗೆ ನೌಕರರು ಮಂಗಳವಾರ ಮುಷ್ಕರ ನಡೆಸಿದರು. ಇದರಿಂದ ಗರಂ ಆದ ಹೈಕೋರ್ಟ್ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯನ್ನು ತರಾಟೆಗೆ ತೆಗೆದುಕೊಂಡಿತು. ಮುಷ್ಕರ ನಿಲ್ಲಿಸದಿದ್ದರೆ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಲಾಗುವುದು. ಎಸ್ಮಾ ಕಾಯ್ದೆಯಡಿ ಸರ್ಕಾರ ಸಂಘಟನೆಯ ಪದಾಧಿಕಾರಿಗಳನ್ನು ಬಂಧಿಸಬಹುದು ಎಂದು ಖಡಕ್ ಎಚ್ಚರಿಕೆ ನೀಡಿತು. ಹೈಕೋರ್ಟ್​ ಎಚ್ಚರಿಕೆ ಬೆನ್ನಲ್ಲೇ ಸಾರಿಗೆ ನೌಕರರು ಮುಷ್ಕರವನ್ನು ಮುಂದೂಡಿದ್ದಾರೆ.

ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿ ಹೈಕೋರ್ಟ್​​ಗೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ಮಂಗಳವಾರ ವಿಚಾರಣೆ ನಡೆಸಿತು. ಸರ್ಕಾರದ ಪರ ಎಜಿ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದ್ದು, ಮುಷ್ಕರದಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ ಎಂದು ಪೀಠಕ್ಕೆ ತಿಳಿಸಿದರು. ವಕೀಲೆ ದೀಕ್ಷಾ ಅಮೃತೇಶ್ ಪಿಐಎಲ್‌ ಸಲ್ಲಿಸಿದ್ದರು.

ಜನರಿಗೆ ನಿಮ್ಮ ಮುಷ್ಕರದಿಂದ ಸಮಸ್ಯೆ ಆಗಬಾರದು. ಎಸ್ಮಾ ಜಾರಿಯಾದರೂ ಮುಷ್ಕರ ನಡೆಸುವುದು ಕಾನೂನುಬಾಹಿರ ಎಂದು ಹೇಳಿ ನಾಲ್ಕೂ ಸಾರಿಗೆ ನಿಗಮಗಳ ನೌಕರರ ಸಂಘಕ್ಕೆ ನೋಟಿಸ್ ನೀಡಿತು. ಮುಷ್ಕರಕ್ಕೆ ನೀಡಿದ್ದ ತಡೆಯಾಜ್ಞೆ ಎರಡು ದಿನ ವಿಸ್ತರಣೆ ಮಾಡಿ ಆಗಸ್ಟ್ 7ಕ್ಕೆ ವಿಚಾರಣೆಯನ್ನು ಮುಂದೂಡಿದೆ.

error: Content is protected !!
Scroll to Top