ಜಿ. ಎಲ್. ಆಚಾರ್ಯ ಶತಮಾನೋತ್ಸವ ಆಚಾರ್ಯ ಕವಿಗೋಷ್ಠಿ
ಪುತ್ತೂರು: ಶಿಕ್ಷಕರಲ್ಲಿ ಕನ್ನಡ ಸಾಹಿತ್ಯದ ಬಗೆಗಿನ ಓದುವಿಕೆ ನಿರಂತರವಾಗಿರಬೇಕು . ಮಾತನಾಡುವಾಗ ಅರ್ಥ ಸಹಿತ ತಿಳಿದುಕೊಂಡು ಪದ ಬಳಕೆ ಮಾಡಬೇಕು. ರಸಭರಿತ ವಿಚಾರದಿಂದ ಕೂಡಿದ ಮಾತುಗಳನ್ನು ಹಾಸ್ಯಾಸ್ಪದ ಎಂದು ಟೀಕೆ ಮಾಡಬಾರದು ಎಂದು ಹಿರಿಯ ಪತ್ರಕರ್ತ ನಿವೃತ್ತ ಪ್ರಾಧ್ಯಾಪಕ ಪ್ರೋ. ವಿ. ಬಿ. ಅರ್ತಿಕಜೆ ಹೇಳಿದರು.
ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ದ.ಕ. ಜಿಲ್ಲೆ, ಸ್ವರ್ಣೋದ್ಯಮಿ ಜಿ. ಎಲ್. ಆಚಾರ್ಯ ಶತಮಾನೋತ್ಸವ ಸಮಿತಿ ವತಿಯಿಂದ ಪುತ್ತೂರಿನ ರೋಟರಿ ಜಿ. ಎಲ್. ಸಭಾಭವನದಲ್ಲಿ ಶಿಕ್ಷಕ ಕವಿಗಳಿಗಾಗಿ ಏರ್ಪಡಿಸಿದ ಅಂತಾರಾಜ್ಯ ಮಟ್ಟದ ಆಚಾರ್ಯ ಕವಿಗೋಷ್ಠಿಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿವಿಧ ಬಗೆಯ ಸಾಹಿತ್ಯ ಓದು ಕಡಿಮೆಯಾಗುತ್ತಿದೆ. ಶಿಕ್ಷಕರು ಸಾಹಿತ್ಯದ ಬಗೆಯ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಬರವಣಿಗೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಕನ್ನಡ ಭಾಷೆಯ ಸೌಂದರ್ಯವನ್ನು ಉಳಿಸಿಕೊಳ್ಳಬೇಕು ಎಂದು ಅವರು ಶಿಕ್ಷಕ ಸಾಹಿತಿಗಳಿಗೆ ಕಿವಿಮಾತು ಹೇಳಿದರು.
ಪುತ್ತೂರಿನ ಜಿ. ಎಲ್. ಆಚಾರ್ಯ ಜ್ಯುವೆಲ್ಲರ್ಸ್ನ ಮಾಲಕ ಜಿ. ಎಲ್. ಬಲರಾಮ ಆಚಾರ್ಯ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಭಾಗವಹಿಸಿದ ಕವಿಗಳಿಗೆ ಸ್ಮರಣಿಕೆ ನೀಡಿ ಅಭಿನಂದನೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಸಾಹಿತಿ ಜಯಾನಂದ ಪೆರಾಜೆ ಸಂಪಾದಕತ್ವದ ಭಗವದ್ಗೀತೆಯ ಬಗ್ಗೆ ಕವಿಗಳಿಂದ ರಚಿತವಾದ ಕವನಸಂಕಲನ ಗೀತಾಫಲ ಕೃತಿಯನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ಪುತ್ತೂರಿನ ಪ್ರಾಂಶುಪಾಲ ಪ್ರೊ. ಸುಬ್ಬಪ್ಪ ಕೈಕಂಬ ಬಿಡುಗಡೆಗೊಳಿಸಿ ಪುಸ್ತಕದ ಹೂರಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಾಹಿತಿಗಳು ತಮ್ಮ ಕೃತಿಗಳಿಂದ ಗುರುತಿಸಲ್ಪಡಬೇಕೇ ಹೊರತು ಹೆಸರಿನಂದಲ್ಲ ಎಂದು ಅಭಿಪ್ರಾಯ ಪಟ್ಟರು.
ಮುಖ್ಯ ಅತಿಥಿ ಸರಕಾರಿ ಪ್ರೌಢ ಶಾಲೆಯ ಶಿಕ್ಷಕಿ ಡಾ. ಶಾಂತಾ ಪುತ್ತೂರು ಅವರು ಹಿರಿಯ ಆಚಾರ್ಯ ವಿ. ಬಿ. ಅರ್ತಿಕಜೆಯವರಿಗೆ ರಕ್ಷಾಬಂಧನ ಮಾಡಿದರು.
ಕವಿಗಳಾದ ಗುಣಾಜೆ ರಾಮಚಂದ್ರ ಭಟ್, ಡಾ. ಸುರೇಶ ನೆಗಳಗುಳಿ , ಹಾ. ಮ. ಸತೀಶ ಬೆಂಗಳೂರು, ವಿಜಯ ಕುಮಾರ ಹೆಬ್ಬಾರಬೈಲು ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಣ ಸೌರಭ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಯಾನಂದ ಪೆರಾಜೆ ಸ್ವಾಗತಿಸಿ, ಪ್ರಸ್ತಾವನೆಗೈದರು. ದೇವಕಿ ಜಯಾನಂದ ಉಪ್ಪಿನಂಗಡಿ ನಿರೂಪಿಸಿದರು. ಕಥಾಬಿಂದು ಪ್ರಕಾಶನ ಮಂಗಳೂರಿನ ಕಾದಂಬರಿಕಾರ ಪಿ. ವಿ. ಪ್ರದೀಪ್ ಕುಮಾರ್ ವಂದಿಸಿದರು.
ಡಾ. ವಾಣಿಶ್ರೀ ಕಾಸರಗೋಡು ತಂಡದಿಂದ ಸಾಹಿತ್ಯ ಗಾನ ನೃತ್ಯ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
























