ದುಡ್ಡಿಲ್ಲ…ದುಡ್ಡಿಲ್ಲ… ಸಂಬಳ ಕೊಡಲು ದುಡ್ಡಿಲ್ಲ : ಆರ್‌.ಅಶೋಕ್‌ ವ್ಯಂಗ್ಯ

ಪಾಪರ್ ಆಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಚೆಲ್ಲಾಟ, ಜನಸಾಮಾನ್ಯರಿಗೆ ಪರದಾಟ ಎಂದು ಟೀಕೆ

ಬೆಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಬೆಳಗ್ಗಿನಿಂದ ರಾಜ್ಯಾದ್ಯಂತ ಸಾರಿಗೆ ನೌಕರರು ಮುಷ್ಕರ ಆರಂಭಿಸಿದ್ದು, ಸಾರಿಗೆ ಬಸ್‌ಗಳು ರಸ್ತೆಗೆ ಇಳಿದಿಲ್ಲ. ಇದರ ಪರಿಣಾಮ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಮೇಲೂ ಬೀರಿದೆ. ದಿವಾಳಿ ಸರ್ಕಾರ ವಿರುದ್ಧ ಸಾರಿಗೆ ನೌಕರರ ಮುಷ್ಕರ, ರಾಜ್ಯಾದ್ಯಂತ ಸ್ತಬ್ಧವಾದ ಬಸ್ ಸಂಚಾರ ಎಂದು ವಿರೋಧ ಪಕ್ಷದ ನಾಯಕರಾದ ಆರ್‌.ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅಶೋಕ್‌, ಸಿದ್ದರಾಮಯ್ಯನವರೇ ದಯವಿಟ್ಟು ರಾಜೀನಾಮೆ ಕೊಟ್ಟು ಕರ್ನಾಟಕವನ್ನು ಉಳಿಸಿ. ಕನ್ನಡಿಗರಿಗೆ ನೆಮ್ಮದಿಯ ಜೀವನ ಮಾಡಲು ಬಿಡಿ. ಬಸ್ಸಿಲ್ಲ..ಬಸ್ಸಿಲ್ಲ… ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಲು ಬಸ್ಸಿಲ್ಲ, ನೌಕರರು, ಉದ್ಯೋಗಿಗಳು ಕೆಲಸಕ್ಕೆ ಹೋಗಲು ಬಸ್ಸಿಲ್ಲ, ನೆಂಟರಿಷ್ಟರ ಮನೆಗಳಿಗೆ, ಶುಭ ಸಮಾರಂಭಗಳಿಗೆ, ಸಾವು-ನೋವಿಗೆ ಹೋಗಲು ಬಸ್ಸಿಲ್ಲ, ಇದು ಬಹುಪಾಲು ಕನ್ನಡಿಗರ ಇವತ್ತಿನ ಬವಣೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.





















































 
 

ರಾಜ್ಯದ ಖಜಾನೆ ಖಾಲಿ ಮಾಡಿ ಪಾಪರ್ ಆಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಚೆಲ್ಲಾಟ, ಜನಸಾಮಾನ್ಯರಿಗೆ ಪರದಾಟ, ಗೋಳಾಟ, ತೊಳಲಾಟ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನಿಮ್ಮ ಘನಂದಾರಿ ಆಡಳಿತದಿಂದ ಸಾರಿಗೆ ನಿಗಮಗಳನ್ನು ಸರ್ವನಾಶ ಮಾಡಿಬಿಟ್ಟಿರಲ್ಲ ಸ್ವಾಮಿ. ಸಾರಿಗೆ ನೌಕರರ ಹಿಂಬಾಕಿ ಕೊಡಲು ದುಡ್ಡಿಲ್ಲ, ನೌಕರರ ವೇತನ ಹೆಚ್ಚಳ ಮಾಡಲು ದುಡ್ಡಿಲ್ಲ, ಹೊಸ ಬಸ್ ಖರೀದಿಗೆ ದುಡ್ಡಿಲ್ಲ, ಹಳೆ ಬಸ್ಸುಗಳ ರಿಪೇರಿಗೆ ದುಡ್ಡಿಲ್ಲ. ಇನ್ನೆಷ್ಟು ದಿನ ಸ್ವಾಮಿ ಈ ಭಂಡ ಬಾಳು. ನಿಮ್ಮ ಅಧಿಕಾರದ ಲಾಲಸೆಗೆ, ದುರಾಡಳಿತಕ್ಕೆ ಜನಸಾಮಾನ್ಯರು ಇನ್ಯಾವ್ಯಾವ ರೀತಿ ಪರದಾಡಬೇಕು, ಇನ್ನೆಷ್ಟು ಕಷ್ಟ ಅನುಭವಿಸಬೇಕು ಎಂದು ಅಶೋಕ್‌ ಪ್ರಶ್ನಿಸಿದ್ದಾರೆ.

error: Content is protected !!
Scroll to Top