ರಸ್ತೆಗಿಳಿಯದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳು
ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಬಂದ್ ಆರಂಭಿಸಿದ್ದಾರೆ. ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಕೆಲಸಕ್ಕೆ ಗೈರು ಹಾಜರಾಗುವ ಮೂಲಕ ಸಾರಿಗೆ ನೌಕರರು ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ. ಆದರೂ ರಾಜ್ಯ ಸರ್ಕಾರ ಸಾರ್ವಜನಿಕರಿಗೆ ತೊಂದರೆ ತಪ್ಪಿಸಲು ಮುಂದಾಗಿದೆ. ಸುಗಮ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದೆ.
ಮುಷ್ಕರದಿಂದಾಗಿ ಸಾರ್ವಜನಿಕರಿಗೆ ಸಮಸ್ಯೆಗಳು ಶುರುವಾಗಿವೆ. ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳನ್ನೇ ಅವಲಂಬಿಸಿರುವ ಜನರು ಕೆಲಸಗಳಿಗೆ, ಶಾಲೆ-ಕಾಲೇಜುಗಳಿಗೆ ಹೋಗಲು ಪರದಾಡುತ್ತಿದ್ದಾರೆ. ಹೀಗಿದ್ದರೂ, ಯಾವುದೇ ಚಿಂತೆ ಬೇಡ ಎಂದು ಸಾರ್ವಜನಿಕರಿಗೆ ರಾಜ್ಯ ಸರ್ಕಾರ ಅಭಯ ನೀಡಿದೆ. ರಾಜ್ಯ ಸರ್ಕಾರದ ಈ ಸೂಚನೆ ಬೆನ್ನಲ್ಲೇ ಹಲವು ಜಿಲ್ಲೆಗಳಲ್ಲಿ ಪರ್ಯಾಯ ವ್ಯವಸ್ಥೆಯನ್ನು ಸಾರಿಗೆ ನಿಗಮಗಳು ಮಾಡಿಕೊಂಡಿವೆ. ಬೆಂಗಳೂರಿನಲ್ಲಿ ಸಾರಿಗೆ ಮುಷ್ಕರದಿಂದಾಗಿ ಬಿಎಂಟಿಸಿ ಬಸ್‌ಗಳ ಸಂಚಾರ ಭಾಗಶಃ ಸ್ಥಗಿತವಾಗಿದೆ. ಬೆಂಗಳೂರು ಒಂದರಲ್ಲೇ 4 ಸಾವಿರ ಖಾಸಗಿ ಬಸ್‌ಗಳನ್ನು ನೀಡುವಂತೆ ಖಾಸಗಿ ಬಸ್ ಮಾಲೀಕರ ಸಂಘಕ್ಕೆ ಸಾರಿಗೆ ಆಯುಕ್ತರು ಬೇಡಿಕೆ ಇಟ್ಟಿದ್ದಾರೆ. ರಾಜ್ಯಾದ್ಯಂತ 11 ಸಾವಿರ ಬಸ್ ಕೇಳಿದ್ದಾರೆ. ಆದರೆ, ಇನ್ನೂ ಅಂತಿಮಗೊಳಿಸಿಲ್ಲ ಎಂದು ಖಾಸಗಿ ಬಸ್ ಮಾಲೀಕರ ಸಂದ ನಟರಾಜ್ ಶರ್ಮಾ ಹೇಳಿದ್ದಾರೆ. ಬುಧವಾರಕ್ಕೆ ಬಸ್ ನೀಡುವಂತೆ ಕೋರಿದ್ದಾರೆ ಎಂದಿರುವುದು ಹೊಸ ಗೊಂದಲ ಸೃಷ್ಟಿಸಿದೆ.
ವೇತನ ಹಿಂಬಾಕಿ, ಸಂಬಳ ಹೆಚ್ಚಳ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಇಂದಿನಿಂದ ಅನಿರ್ದಿಷ್ಠಾವಧಿ ಮುಷ್ಕರ ಪ್ರಾರಂಭಿಸಲಾಗಿದೆ. 1800 ಕೋಟಿ ರೂ. ಹಿಂಬಾಕಿ, ಕೋಟ್ಯಂತರ ರೂ. ಪಿಎಫ್ ಬಾಕಿ, ವೇತನ ಹೆಚ್ಚಳ ಸೇರಿದಂತೆ ಹತ್ತಾರು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಲಾಗಿದೆ. ಆದರೆ ಹಿಂಬಾಕಿ ಕೊಡಲು ಸರ್ಕಾರ ಒಪ್ಪದಿದ್ದ ಕಾರಣ ನಿನ್ನೆ ನಡೆದ ಸಂಧಾನ ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲಾಗಿಲ್ಲ. ಹೀಗಾಗಿ ಮಧ್ಯರಾತ್ರಿಯಿಂದಲೇ ಮುಷ್ಕರ ಪ್ರಾರಂಭಿಸಲಾಗಿದೆ.
ಇದರ ನಡುವೆ ನೌಕರರ ಮುಷ್ಕರವನ್ನು 1 ದಿನ ತಡೆ ಹಿಡಿಯುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಈ ಎಲ್ಲ ಬೆಳವಣಿಗೆಯ ಹೊರತಾಗಿಯೂ ತಮ್ಮ ನಿರ್ಧಾರದಿಂದ ಹಿಂದೆ ಸರಿಯದ ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಇಂದು ಬೆಳಗ್ಗೆಯಿಂದಲೇ ಮುಷ್ಕರಕ್ಕಿಳಿದಿದ್ದಾರೆ. ಇದರಿಂದ ರಾಜ್ಯಾದ್ಯಂತ ಬಸ್‌ಗಳ ಸೇವೆಯಲ್ಲಿ ವ್ಯತ್ಯಯವಾಗಿ ಪ್ರಯಾಣಿಕರು ಪರದಾಡುವ ಆತಂಕ ಎದುರಾಗಿದೆ.
ಬೆಳಗ್ಗೆ 6 ಗಂಟೆಯಿಂದಲೇ ಸಾರಿಗೆ ನೌಕರರು ಮುಷ್ಕರ ಆರಂಭಿಸಿದ್ದು, ನಾಲ್ಕು ನಿಗಮಗಳ ಬಸ್‌ಗಳ ಸಂಚಾರ ಸ್ತಬ್ಧಗೊಂಡಿವೆ. ಬೆಂಗಳೂರು, ಮೈಸೂರು, ಕಲಬುರಗಿ, ದಾವಣಗೆರೆ, ಹಾಸನ, ಬೆಳಗಾವಿ, ಚಿಕ್ಕಬಳ್ಳಾಪುರ, ಹಾವೇರಿ ಸೇರಿದಂಗೆ ರಾಜ್ಯಾದ್ಯಂತ ಜಿಲ್ಲೆಗಳಲ್ಲಿ ನೌಕರರು ಕೆಲಸಕ್ಕೆ ಹಾಜರಾಗದೆ ಪ್ರತಿಭಟನೆಗೆ ಧುಮುಕಿದ್ದಾರೆ. ತುರ್ತು ಕಾರ್ಯಗಳಿಗೆ ಪ್ರಯಾಣಿಕರು ಖಾಸಗಿ ಬಸ್, ಟ್ರಾವೆಲ್ಸ್, ಆಟೋ, ಟ್ಯಾಕ್ಸಿಗಳ ಮೊರೆ ಹೋಗುತ್ತಿದ್ದಾರೆ.
ಈ ನಡುವೆ ಹೈಕೋರ್ಟ್ ಆದೇಶದ ಕುರಿತು ಕಾನೂನು ತಜ್ಞರ ಸಲಹೆ ಪಡೆಯಲು ಜಂಟಿ ಕ್ರಿಯಾ ಸಮಿತಿ ನಿರ್ಧರಿಸಿದೆ. ಮಂಗಳವಾರ ಬೆಳಗ್ಗೆ 10 ಗಂಟೆ ವೇಳೆಗೆ ಸಮಿತಿ ಪದಾಧಿಕಾರಿಗಳ ಸಭೆ ನಡೆಸಿ ಮುಷ್ಕರದ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದೆ. ಒಂದು ವೇಳೆ ಕ್ರಿಯಾ ಸಮಿತಿ ಪೂರ್ವ ನಿರ್ಧಾರದಂತೆ ಮುಷ್ಕರಕ್ಕೆ ಇಳಿದರೆ ರಾಜ್ಯಾದ್ಯಂತ ಸರ್ಕಾರಿ ಸಾರಿಗೆ ಬಸ್‌ಗಳ ಸಂಚಾರದಲ್ಲಿ ಭಾರಿ ವ್ಯತ್ಯಯವಾಗಲಿದ್ದು ಪ್ರಯಾಣಿಕರಿಗೆ ಬಿಸಿ ತಟ್ಟಲಿದೆ.
ಸಂಧಾನ ವಿಫಲ
ನಿನ್ನೆ ಮೂರನೇ ಸಂಧಾನ ಸಭೆ ಖುದ್ದು ಸಿಎಂ ನೇತೃತ್ವದಲ್ಲಿ ನಡೆದರೂ ಒಮ್ಮತದ ನಿರ್ಧಾರಕ್ಕೆ ಬರಲಾಗಿಲ್ಲ. 38 ತಿಂಗಳ ಹಿಂಬಾಕಿ 1,800 ಕೋಟಿ ಕೊಡಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇದಕ್ಕೆ 800 ಕೋಟಿ ರೂ. ಆದರೂ ಈಗ ಪಾವತಿಸಿ, ನಂತರ ಕಂತಿನ ರೂಪದಲ್ಲಿ 1,000 ಕೋಟಿ ರೂ ಕೊಡುವಂತೆ ಮನವಿ ಮಾಡಿದಾಗ ಸಿಎಂ ಇದಕ್ಕೆ ಒಪ್ಪಲಿಲ್ಲ ಎನ್ನಲಾಗಿದೆ. ಹೀಗಾಗಿ ಸಭೆಯು ವಿಫಲವಾಗಿದ್ದು, ಕಾರ್ಮಿಕ ಮುಖಂಡರು ಮುಷ್ಕರದ ಘೋಷಣೆ ಮಾಡಿದರು.
ಸಭೆಗೂ ಮುನ್ನವೇ ಸಾರಿಗೆ ಇಲಾಖೆ ಆಗಸ್ಟ್ 4ರಿಂದಲೇ ಸಾರಿಗೆ ನೌಕರರ ರಜೆಗಳನ್ನ ರದ್ದುಗೊಳಿಸಿದೆ. ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ಉಳಿದೆಲ್ಲ ರಜೆಗಳನ್ನ ರದ್ದುಗೊಳಿಸಲಾಗಿದೆ. ಅನಿವಾರ್ಯವಿದ್ದರೆ ವಾರದ ರಜೆಗಳನ್ನು ಕಡಿತಗೊಳಿಸಿ ಕರ್ತವ್ಯಕ್ಕೆ ನಿಯೋಜಿಸಿ, ಒಂದು ವೇಳೆ ಕೆಲಸಕ್ಕೆ ಬಾರದಿದ್ದರೆ ಅವರ ವೇತನ ಕಟ್ ಮಾಡುವಂತೆ ನಾಲ್ಕು ನಿಗಮಗಳ ಅಧಿಕಾರಿಗಳಿಗೆ ಸೂಚನೆ ನೀಡಿದೆ.
























