ನೀವು ನಿಜವಾದ ಭಾರತೀಯನೇ ಆಗಿದ್ದರೆ… : ರಾಹುಲ್‌ ಗಾಂಧಿಗೆ ಸುಪ್ರೀಂ ಕೋರ್ಟ್‌ ಛೀಮಾರಿ

ಭಾರತ್‌ ಜೋಡೊ ಯಾತ್ರೆ ಸಂದರ್ಭ ನೀಡಿದ ಹೇಳಿಕೆಗೆ ಸರ್ವೋಚ್ಚ ನ್ಯಾಯಾಲಯದಿಂದ ತೀಕ್ಷ್ಣ ತರಾಟೆ

ನವದೆಹಲಿ: ಮಾನನಷ್ಟ ಪ್ರಕಣಣವೊಂದರಲ್ಲಿ ಸುಪ್ರೀಂ ಕೋರ್ಟ್‌ ಇಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿಯನ್ನು ತೀಕ್ಷ್ಣವಾಗಿ ತರಾಟೆಗೆ ತೆಗೆದುಕೊಂಡಿದ್ದು, ನೀವು ನಿಜವಾದ ಭಾರತೀಯನಾಗಿದ್ದರೆ ಈ ರೀತಿ ಹೇಳುತ್ತಿರಲಿಲ್ಲ ಎಂದು ಛೀಮಾರಿ ಹಾಕಿದೆ. ಇದೇ ವೇಳೆ ಈ ಮಾನನಷ್ಟ ಮೊಕದ್ದಮೆಗೆ ತಡೆ ನೀಡಿದೆ.

ಭಾರತದ 2,000 ಕಿ.ಮೀ. ನೆಲವನ್ನು ಚೀನ ಕಬಳಿಸಿದೆ ಎಂಬ ಹೇಳಿಕೆಗೆ ಸಂಬಂಧಿಸಿ ದಾಖಲಾಗಿರುವ ಮಾನನಷ್ಟ ಮೊಕದ್ದಮೆ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ರಾಹುಲ್‌ ಗಾಂಧಿಗೆ ಕ್ಲಾಸ್‌ ತೆಗೆದುಕೊಂಡಿದೆ.





















































 
 

ಭಾರತ್‌ ಜೋಡೊ ಯಾತ್ರೆ ವೇಳೆ ರಾಹುಲ್‌ ಗಾಂಧಿ ಸೇನೆಯ ಅಧಿಕಾರಿಯೊಬ್ಬರೇ ನನಗೆ ಚೀನ ಭಾರತದ 2000 ಕಿ.ಮೀ. ಭೂಮಿ ಕಬಳಿಸಿರುವ ಮಾಹಿತಿ ನೀಡಿದ್ದಾರೆ ಎಂದು ಹೇಳಿಕೆ ನೀಡಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದರು. ಆದರೆ ಈ ಅಧಿಕಾರಿ ಯಾರು ಅಥವಾ ಇದಕ್ಕೇನು ಸಾಕ್ಷಿ ಇದೆ ಎಂಬುದನ್ನು ಅವರು ಹೇಳಿರಲಿಲ್ಲ.

ಮಾನನಷ್ಟ ಮೊಕದ್ದಮೆ ವಿರುದ್ಧ ರಾಹುಲ್‌ ಗಾಂಧಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾ. ದೀಪಂಕರ್‌ ದತ್ತ ಮತ್ತು ನ್ಯಾ. ಆಗಸ್ಟನ್‌ ಜಾರ್ಜ್‌ ಮಸಿಹ ಅವರಿದ್ದ ಪೀಠ, ಚೀನ ಭಾರತದ 2000 ಕಿ.ಮೀ. ಭೂಮಿಯನ್ನು ಕಬಳಿಸಿದೆ ಎಂಬುದು ನಿಮಗೆ ಹೇಗೆ ತಿಳಿಯಿತು? ನೀವು ನಿಜವಾದ ಭಾರತೀಯನಾಗಿದ್ದರೆ ಇಂಥ ಹೇಳಿಕೆ ನೀಡುತ್ತಿರಲಿಲ್ಲ ಎಂದು ತೀಕ್ಷ್ಣವಾಗಿ ಚಾಟಿ ಬೀಸಿದೆ.

ವಿಪಕ್ಷ ನಾಯಕನಾಗಿ ಜವಾಬ್ದಾರಿಯುತ ಪದವಿ ಹೊಂದಿರುವ ನೀವು ಇಂಥ ಹೇಳಿಕೆಗಳನ್ನು ಏಕೆ ನೀಡುತ್ತೀರಿ? ಸಂಸತ್ತಿನಲ್ಲಿ ಏಕೆ ಈ ವಿಚಾರ ಎತ್ತುವುದಿಲ್ಲ? ಎಂದು ನ್ಯಾಯಾಲಯ ಪ್ರಶ್ನಿಸಿದೆ.

ಭಾರತ್‌ ಜೋಡೊ ಯಾತ್ರೆ ವೇಳೆ ರಾಹುಲ್‌ ಗಾಂಧಿ ಭಾರತೀಯ ಸೇನೆ ಮತ್ತು ದೇಶದ ಕುರಿತು ಅನೇಕ ಸಲ ಮಾನಹಾನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಉದಯ್‌ ಶಂಕರ್‌ ಶ್ರೀವಾಸ್ತವ ಎಂಬವರು ಮಾನನಷ್ಟ ದಾವೆ ಹೋಡಿದ್ದಾರೆ.

2023ರಲ್ಲಿ ಭಾರತ್‌ ಜೋಡೊ ಯಾತ್ರ ಮುಕ್ತಾಯವಾಗುವಾಗ ರಾಹುಲ್‌ ಗಾಂಧಿಯ ಚೀನ ಪರ ಹೇಳಿಕೆಗಳು ಪರಾಕಾಷ್ಠೆಗೇರಿದ್ದವು. ಅವರ ಹೇಳಿಕೆಯಿಂದ ಚೀನಕ್ಕೆ ಭಾರತದ ಜೊತೆ ಗಡಿ ತಗಾದೆಯನ್ನು ಇನ್ನಷ್ಟು ಬಿರುಸಾಗಿ ಮುಂದುವರಿಸಲು ಅನುಕೂಲವಾಗಿದೆ ಎಂದು ಶ್ರೀವಾಸ್ತವ ಆರೋಪಿಸಿದ್ದಾರೆ.

ಚೀನ ನಮ್ಮ ನೆಲದಲ್ಲಿ ಬಂದು ಮಕುಳಿತಿರುವುದು ಬಹಳ ಗಂಭೀರ ವಿಚಾರ. ನಮ್ಮ ಪ್ರಧಾನಿಮಂತ್ರಿ ಮಾತ್ರ ಚೀನ ನಮ್ಮ ನೆಲ ಕಬಳಿಸಿಲ್ಲ ಎಂದು ನಂಬಿದ್ದಾರೆ. ಇತ್ತೀಚೆಗೆ ಸೇನೆಯ ಮಾಜಿ ಅಧಿಕಾರಿಗಳೇ ನನಗೆ ಚೀನ ನಮ್ಮ ನೆಲ ಕಬಳಿಸಿರುವುದನ್ನು ಹೇಳಿದ್ದಾರೆ. ಲಡಾಖ್‌ನ ನಿಯೋಗವೊಂದು ನನ್ನನ್ನು ಭೇಟಿಯಾದಾಗ ನಮ್ಮ 2,000 ಕಿ.ಮೀ. ನೆಲ ಚೀನದ ವಶದಲ್ಲಿದೆ ಎಂದು ಹೇಳಿದೆ ಎಂಬುದಾಗಿ ರಾಹುಲ್‌ ಗಾಂಧಿ ವಾಗ್ದಾಳಿ ನಡೆಸಿದ್ದರು.

error: Content is protected !!
Scroll to Top