ಬಂಟ್ವಾಳ : ನಿಮಗೆ ಗಿಫ್ಟ್ ಪಾರ್ಸೆಲ್ ಇದೆ ಎಂದು ನಂಬಿಸಿ ಬಂಟ್ವಾಳದ ಮಹಿಳೆಯೊಬ್ಬರಿಗೆ ಸೈಬರ್ ಚೋರರು 2.35 ಲ.ರೂ. ವಂಚಿಸಿದ ಕುರಿತು ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಂಟ್ವಾಳದ ಭಾರತಿ ಕೆ. ಎಂಬ ಮಹಿಳೆಗೆ ಕಳೆದ ವರ್ಷ ಡಿ.3ರಂದು ದೆಹಲಿಯ ಡಿಎಚ್‌ಎಲ್ ಕೊರಿಯರ್ ಸಂಸ್ಥೆಯಿಂದ ಎಂದು ಹೇಳಿಕೊಂಡು ವಂಚಕರು ಕರೆ ಮಾಡಿದ್ದಾರೆ. ಚಿನ್ನ, ಐಫೋನ್ ಮತ್ತು 49 ಲ.ರೂ. ಮೌಲ್ಯದ ಕರೆನ್ಸಿ ಪಾರ್ಸೆಲ್ ಇದೆ. ಅದನ್ನು ಬಿಡಿಸಿಕೊಳ್ಳಬೇಕಾದರೆ ಮುಂಗಡವಾಗಿ ತೆರಿಗೆ ಪಾವತಿಸಬೇಕೆಂದು ಎಂದು ಮಹಿಳೆಯನ್ನು ನಂಬಿಸಿದ್ದಾರೆ.
ಮಹಿಳೆ ತನ್ನ ಬಳಿ ಅಷ್ಟು ಹಣ ಇಲ್ಲ ಎಂದು ಹೇಳಿದಾಗ ಕರೆ ಮಾಡಿದವರು ಬಜಾಜ್ ಫೈನಾನ್ಸ್‌ನಿಂದ ಸಾಲದ ವ್ಯವಸ್ಥೆ ಮಾಡಿಕೊಡುತ್ತೇವೆ. 10 ಲ.ರೂ. ತನಕ ಸಾಲ ಸಿಗುತ್ತದೆ. ಗಿಫ್ಟ್ ಪಾರ್ಸೆಲ್ ಬಂದ ಕೂಡಿಲೇ ಸಾಲ ಮರಳಿಸಿ ಎಂದು ಹೇಳಿದ್ದಾರೆ. ಸಾಲ ಮಂಜೂರಾತಿಗೆಂದು ಮಹಿಳೆಯಿಂದ 80 ಸಾವಿರ ಪಡೆದುಕೊಂಡಿದ್ದಾರೆ.
ಡಿ.6ರಂದು ಮತ್ತೆ ಕರೆಮಾಡಿ 35 ಸಾವಿರ ಹಾಗೂ ಜೂ.12ರಂದು 65 ಸಾವಿರ, ಜೂ.16ರಂದು 50 ಸಾವಿರ ರೂ. ವರ್ಗಾಯಿಸಿಕೊಂಡಿದ್ದು, ಒಟ್ಟು 2.35 ಲ.ರೂ. ಪಡೆದುಕೊಂಡಿದ್ದಾರೆ. ಬಹಳ ದಿನ ಕಾದರೂ ಮಹಿಳೆಗೆ ಗಿಫ್ಟ್ ಪಾರ್ಸೆಲ್ ಬಂದಿಲ್ಲ ಮತ್ತು ಕರೆ ಮಾಡಿದವರು ಫೋನ್ ಕರೆಗೆ ಸಿಕ್ಕಿಲ್ಲ. ಮೋಸ ಹೋದದ್ದು ಅರಿವಾದ ಬಳಿಕ ಮಹಿಳೆ ದೂರು ದಾಖಲಿಸಿದ್ದಾರೆ.
























