ಯುವತಿಯ ಶವ ಹೂತು ಹಾಕಿದ್ದನ್ನು ನೋಡಿದ್ದೇನೆ ಎಂದ ಸ್ಥಳೀಯ ಹೋರಾಟಗಾರ
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಸಾಮೂಹಿಕ ಮೃತದೇಹಗಳನ್ನು ಹೂತು ಹಾಕಿರುವ ಘಟನೆಗೆ ತನಿಖೆ ಮುಂದುವರಿದಿರುವಂತೆ ಇನ್ನೋರ್ವ ವ್ಯಕ್ತಿ ದೂರು ದಾಖಲಿಸಿದ್ದಾರೆ. ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಹಾಜರಾದ ಸಾಮಾಜಿಕ ಹೋರಾಟಗಾರ ಜಯಂತ್ ಟಿ ಎಂಬವರು ತಾನು ನೋಡಿದ್ದೇನೆ ಎಂದು ಹೇಳಿಕೊಂಡ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದಾರೆ.
ಸ್ಥಳೀಯ ನಿವಾಸಿ ಜಯಂತ್ ಟಿ. ಬೆಳ್ತಂಗಡಿಯ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಂದೆ ಶನಿವಾರ ಹಾಜರಾಗಿ, ದಶಕದ ಹಿಂದೆ ನಡೆದ ಅನುಮಾನಾಸ್ಪದ ಅಂತ್ಯಕ್ರಿಯೆಯ ನೇರ ಮಾಹಿತಿಯ ಆಧಾರದ ಮೇಲೆ ದೂರು ದಾಖಲಿಸಿದ್ದಾರೆ. ಬಾಲಕಿಯ ಶವ ಹೂತಿಟ್ಟ ಜಾಗ ನನಗೆ ಗೊತ್ತಿದೆ. ಎಸ್‍ಐಟಿಗೆ ತೋರಿಸಲು ಸಿದ್ಧನಿದ್ದೇನೆ. ಕೊಲೆಯೋ..? ಏನೋ ನಂಗೆ ಗೊತ್ತಿಲ್ಲ. ಬಾಲಕಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿತ್ತು ಎಂದು ಹೇಳಿಕೊಂಡಿದ್ದಾರೆ.
ಎಸ್‌ಐಟಿ ಅಧಿಕಾರಿಗಳನ್ನು ಭೇಟಿಯಾದ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಜಯಂತ್, ಸುಮಾರು 15 ವರ್ಷಗಳ ಹಿಂದೆ ಧರ್ಮಸ್ಥಳ ಗ್ರಾಮದಲ್ಲಿ ಯುವತಿಯ ಶವವನ್ನು ತಾವು ಖುದ್ದಾಗಿ ನೋಡಿದ್ದಾಗಿ ಹೇಳಿಕೊಂಡಿದ್ದಾರೆ. ಯಾವುದೇ ಕಾನೂನು ಪ್ರಕ್ರಿಯೆ, ಪೊಲೀಸ್ ಹಸ್ತಕ್ಷೇಪ ಅಥವಾ ಮರಣೋತ್ತರ ಪರೀಕ್ಷೆ ಇಲ್ಲದೆ ಆ ಶವವನ್ನು ಹೂಳಲಾಗಿದೆ ಎಂದಿದ್ದಾರೆ.
ಹುಡುಗಿಯ ಶವವನ್ನು ನಾನೇ ನೋಡಿದೆ. ಅದನ್ನು ಆಸ್ಪತ್ರೆಗೆ ಕೊಂಡೊಯ್ಯಲಿಲ್ಲ, ಯಾವುದೇ ಎಫ್‌ಐಆರ್ ದಾಖಲಿಸಲಾಗಿಲ್ಲ ಮತ್ತು ಮರಣೋತ್ತರ ಪರೀಕ್ಷೆಯನ್ನೂ ಮಾಡಲಾಗಿಲ್ಲ. ಶವವನ್ನು ಸದ್ದಿಲ್ಲದೆ ಸಮಾಧಿ ಮಾಡಲಾಯಿತು. ಇದನ್ನು ದೃಢೀಕರಿಸುವ ವಿಶ್ವಾಸಾರ್ಹ ಮಾಹಿತಿ ನನ್ನಲ್ಲಿದೆ. ಅದನ್ನೇ ನಾನು ಎಸ್‌ಐಟಿಗೆ ವರದಿ ಮಾಡಿದ್ದೇನೆ ಎಂದು ಅವರು ಹೇಳಿದರು.
ಈ ಘಟನೆಯು ವರ್ಷಗಳಿಂದ ತನ್ನನ್ನು ಕಾಡುತ್ತಿತ್ತು ಮತ್ತು ಈ ಹಿಂದೆ ಹಲವಾರು ವೇದಿಕೆಗಳಲ್ಲಿ ಇದರ ಬಗ್ಗೆ ಮಾತನಾಡಿದ್ದೆ ಎಂದು ಜಯಂತ್ ಹೇಳಿದರು. ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿ ಪ್ರಕರಣದ ಬಗ್ಗೆ ಸಾರ್ವಜನಿಕ ಗಮನ ಸೆಳೆದ ನಂತರ ಎಸ್.ಐ.ಟಿ ತಂಡದ ಮೇಲೆ ವಿಶ್ವಾಸವಿರಿಸಿ ದೂರು ನೀಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ನಾಲ್ಕೈದು ಶವಗಳನ್ನು ಸಾಲಾಗಿ ಹೂತಿದ್ದೇನೆ ಎಂದ ಗುಂಡಿಯಲ್ಲೂ ಏನೂ ಸಿಗಲಿಲ್ಲ
ಈ ನಡುವೆ ಐದನೇ ದಿನ ಶೋಧ ಕಾರ್ಯದಲ್ಲಿ ಕೂಡ ಏನೂ ಸಿಕ್ಕಿಲ್ಲ. ಬಹಳ ಕುತೂಹಲಕ್ಕೆ ಕಾರಣವಾಗಿದ್ದ 9 ಮತ್ತು 10ನೇ ಪಾಯಿಂಟ್‌ನಲ್ಲಿ ದಿನಪೂರ್ತಿ ಶೋಧಿಸಿದರೂ ಕುರುಹು ಪತ್ತೆಯಾಗಿಲ್ಲ. ಭಾನುವಾರ ಶೋಧ ಕಾರ್ಯಾಚರಣೆಗೆ ಬ್ರೇಕ್ ನೀಡಲಾಗಿದ್ದು, ಉಳಿದ ಮೂರು ಸ್ಪಾಟ್‌ಗಳ ಬಗ್ಗೆ ಕುತೂಹಲ ಹೆಚ್ಚಿದೆ. ಹತ್ತು ಗುಂಡಿ ಅಗೆದರೂ ಏನೂ ಸಿಗದಿರುವುದು ಮುಸುಕುಧಾರಿಯ ಮೇಲೆ ಅನುಮಾನ ಮೂಡಲು ಕಾರಣವಾಗಿದೆ.
9ನೇ ಸ್ಪಾಟ್‌ನಲ್ಲಿ ನಾಲ್ಕೈದು ಶವಗಳನ್ನು ಸಾಲು ಸಾಲಾಗಿ ಹೂತು ಹಾಕಿದ್ದೆ ಎಂದು ಅನಾಮಿಕ ವ್ಯಕ್ತಿ ದೂರ ನೀಡಿದ್ದ. ಎಸ್ಐಟಿ ಕಾರ್ಯಾಚರಣೆ ನಡೆಸಿದ ಮಧ್ಯಾಹ್ನ 2.30 ರ ಸುಮಾರಿಗೆ ಕಾರ್ಯಾಚರಣೆಯಲ್ಲಿ ಯಾವುದೇ ಕುರುಹುಗಳು ಲಭ್ಯವಾಗಿಲ್ಲ. ಎಸ್ಐಟಿ ಪೊಲೀಸರು ದೂರುದಾರ ವ್ಯಕ್ತಿಯನ್ನು ಕರೆತಂದು ಸ್ಪಾಟ್‌ಗೆ ಹಾಜರಾಗಿದ್ದರು. ಉತ್ಖನನ ಮಾಡುವ ಸಂದರ್ಭ ಬಂಡೆಕಲ್ಲುಗಳು ಆಗಾಗ ಅಡ್ಡ ಬರುತ್ತಿದ್ದರಿಂದ ಸಮತಟ್ಟು ಮಾಡಲು ಮತ್ತು ಹೊಂಡ ತೋಡಲು ಮಿನಿ ಹಿಟಾಚಿಯನ್ನು ಬಳಸಲಾಗಿತ್ತು. ಹತ್ತರಲ್ಲಿ ಶೋಧ ನಡೆಸುವಾಗ ಧಾರಾಕಾರ ಮಳೆ ಆರಂಭವಾಯಿತು. ಸುಮಾರು ಒಂದೂವರೆ ಗಂಟೆಗಳ ಕಾಲ ಬಿಟ್ಟುಬಿಡದೆ ಮಳೆ ಸುರಿದರೂ ಕಾರ್ಯಾಚರಣೆಯನ್ನು ಅಧಿಕಾರಿಗಳು ನಿಲ್ಲಿಸಲಿಲ್ಲ. ಟಾರ್ಪಾಲ್‌ಗಳನ್ನು ಬಳಸಿ ಕಾಡಿನ ನಡುವೆ ಶೋಧ ಕಾರ್ಯ ನಡೆಸಿದರು. ಹತ್ತನೇ ಪಾಯಿಂಟ್‌ನಲ್ಲೂ ಕೂಡ ದೂರುದಾರನಿಗೆ ಹಿನ್ನಡೆಯಾಗಿತ್ತು.
ಇನ್ನು ಬಾಕಿ ಉಳಿದಿರುವುದು ಮೂರು ಜಾಗ ಮಾತ್ರ. ನೂರಾರು ಶವಗಳು ಇವೆ ಎಂದಿದ್ದ ದೂರುದಾರ ತೋರಿಸಿದ ಜಾಗದಲ್ಲಿ ಸಿಕ್ಕಿದ್ದು ಒಂದು ಕಡೆ ಕುರುಹುಗಳು ಮಾತ್ರ. ಪೊಲೀಸರು, ಸಾರ್ವಜನಿಕರನ್ನು ದೂರುದಾರ ಯಾಮಾರಿಸಿದನಾ? ಇಡೀ ವ್ಯವಸ್ಥೆಯ ಕಾಲಹರಣ ಮಾಡಿದ ಎಂಬ ಸಂಶಯಗಳು ಕೇಳಿ ಬರುತ್ತಿದೆ.
























