ರಸ್ತೆ ಬದಿ ಅಳವಡಿಸಿದ್ದ ಕಾಣಿಕೆ ಡಬ್ಬಿಯ ಬೀಗ ಒಡೆದು ಹಣ ಕದ್ದ ಯುವಕರು
ವಿಟ್ಲ: ಕನ್ಯಾನ ಗ್ರಾಮದ ದೇಲಂತಬೆಟ್ಟುವಿನಲ್ಲಿ ರಸ್ತೆ ಬದಿಯಲ್ಲಿದ್ದ ಎರಡು ಕಾಣಿಕೆ ಡಬ್ಬಿಗಳಲ್ಲಿದ್ದ ಹಣ ಕದ್ದ ಮೂವರನ್ನು ವಿಟ್ಲ ಪೊಲೀಸರು ಬಂದಿಸಿದ್ದಾರೆ. ವಿಟ್ಲ ಕಸಬಾ ಗ್ರಾಮದ ತ್ವಾಹಿದ್ (19), ಉಮ್ಮರ್ ಫಾರೂಕ್ (18) ಮತ್ತು ನಬೀಲ್( 18) ಆರೋಪಿಗಳು.
ಕನ್ಯಾನ ಗ್ರಾಮದ ದೇಲಂತಬೆಟ್ಟು ನಿವಾಸಿ ಡಿ.ನಾರಾಯಣ ರಾವ್ ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಾರಾಯಣ ಅವರು ಅಧ್ಯಕ್ಷರಾಗಿರುವ ಧಾರ್ಮಿಕ ಕೇಂದ್ರಕ್ಕೆ ಸಂಬಂಧಿಸಿದ ಕಾಣಿಕೆ ಕಟ್ಟೆಯನ್ನು ಕನ್ಯಾನ ಗ್ರಾಮದ ದೇಲಂತಬೆಟ್ಟು ಶಾಲಾ ಪಕ್ಕದ ರಸ್ತೆಯ ಬದಿಯಲ್ಲಿ ಹಾಗೂ ದೇಲಂತಬೆಟ್ಟು ಚರ್ಚಿನ ಕೆಳಗಡೆ ರಸ್ತೆಯ ಬದಿಯಲ್ಲಿ ಅಳವಡಿಸಿದ್ದರು. ಕಾಣಿಕೆ ಕಟ್ಟೆಗಳಲ್ಲಿ ಸಂಗ್ರಹವಾಗುವ ಹಣವನ್ನು ತೆಗೆಯಲು ಜುಲೈ 26ರಂದು ಈ ಸ್ಥಳಗಳಿಗೆ ತೆರಳಿದಾಗ, ಎರಡೂ ಕಾಣಿಕೆ ಕಟ್ಟೆಗಳ ಬೀಗವನ್ನು ಒಡೆದು ಸುಮಾರು 15,000 ರೂ. ಕಳವು ಮಾಡಿರುವುದು ಕಂಡುಬಂದಿರುತ್ತದೆ ಎಂದು ದೂರಿನಲ್ಲಿ ತಿಳಿಸಿದ್ದರು. ಈ ಬಗ್ಗೆ ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
























