ಇನ್ನು ಗುರುತು ಮಾಡಿದ ಐದು ಸ್ಥಳಗಳ ಅಗೆತ ಮಾತ್ರ ಬಾಕಿ
ಬೆಂಗಳೂರು: ಧರ್ಮಸ್ಥಳದ ನೇತ್ರಾವತಿ ದಂಡೆಯ ಪಾಯಿಂಟ್ 6ರಲ್ಲಿ ಸಿಕ್ಕಿದ ಅಸ್ಥಿಪಂಜರದ ಮೂಳೆಗಳನ್ನು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌ಗೆ) ಕಳುಹಿಸಲಾಗಿದೆ.
ಧರ್ಮಸ್ಥಳದಲ್ಲಿ ಹೂತಿಟ್ಟ ಶವಗಳ ಪ್ರಕರಣವನ್ನು ಬೆನ್ನತ್ತಿದ ವಿಶೇಷ ತನಿಖಾ ತಂಡಕ್ಕೆ ನೇತ್ರಾವತಿ ತಟದ ಪಾಯಿಂಟ್ 6ರಲ್ಲಿ ಅಸ್ಥಿಪಂಜರದ ಮೂಳೆಗಳು, ತಲೆಬುರುಡೆ ಸಿಕ್ಕಿದೆ. ಸುಮಾರು 25 ಮೂಳೆಗಳನ್ನು ಎಸ್‌ಐಟಿ ತಂಡ ಬೆಂಗಳೂರಿನ ಎಫ್‌ಎಸ್‌ಎಲ್‌ಗೆ ರವಾನಿಸಿದೆ. ಬೆಂಗಳೂರಿನ ಪ್ರಯೋಗಾಲಯದಲ್ಲಿ ಮೂಳೆಗಳ ಲಿಂಗ, ವಯಸ್ಸು, ಎತ್ತರ, ಗಾತ್ರ ಪತ್ತೆ ಪರೀಕ್ಷೆ ನಡೆಸಲಾಗುತ್ತದೆ. ಬಳಿಕ ಡಿಎನ್‌ಎ ಪರೀಕ್ಷೆ ನಡೆಸಲಾಗುತ್ತದೆ.
ಅಸ್ಥಿಪಂಜರ ಇಡಿಯಾಗಿ ಸಿಕ್ಕರೆ ಸಾವಿನ ಸಂಭವನೀಯ ಕಾರಣ ತಿಳಿಯಬಹುದು. ಮೃತನ ಲಿಂಗ, ಅಂದಾಜು ವಯಸ್ಸು, ಎತ್ತರ ಪತ್ತೆ ಮಾಡಬಹುದು. 22 ವರ್ಷಕ್ಕಿಂತ ಕಡಿಮೆ ವಯಸ್ಸಾಗಿದ್ದರೆ ಮೌಲ್ಯಮಾಪನ ನಿಖರವಾಗಿರಬಹುದು. ಮೂಳೆಗಳಿಂದ ದೇಹದ ಮೇಲೆ ಗಾಯವಾಗಿದ್ದರೆ ಪತ್ತೆ ಮಾಡಲು ಸಾಧ್ಯವಿದೆ. ದವಡೆ ಹಲ್ಲು, ಉದ್ದನೆಯ ಮೂಳೆಯಿಂದ ಮೃತನ ಗುರುತು ಪತ್ತೆ ಮಾಡಬಹುದು. ಮೂಳೆಯ ಡಿಎನ್‌ಎ ಮಾದರಿ ಜೊತೆ ಮೃತನ ಕುಟುಂಬದೊಂದಿಗೆ ಹೋಲಿಕೆ ಮಾಡಬಹುದು.
ನಿನ್ನೆ 7 ಹಾಗೂ 8 ಪಾಯಿಂಟ್‌ಗಳ ಉತ್ಖನನ ಮುಗಿದಿದೆ. ಇನ್ನು 5 ಸ್ಥಳಗಳ ಶೋಧ ಕಾರ್ಯ ಬಾಕಿ ಉಳಿದಿದೆ. ಒಂದೆರಡು ದಿನಗಳಲ್ಲಿ ಎಲ್ಲ 13 ಸ್ಥಳಗಳ ಉತ್ಖನನ ಮುಗಿಯಲಿದೆ. 6ನೇ ಸ್ಥಳದಲ್ಲಿ ಪುರುಷನ ಅಸ್ಥಿಪಂಜರದ ಕುರುಹು ಸಿಕ್ಕಿದ್ದನ್ನು ಬಿಟ್ಟರೆ, ಇದುವರೆಗೆ ಎಸ್‌ಐಟಿಗೆ ಯಾವುದೇ ಸುಳಿವು ಸಿಕ್ಕಿಲ್ಲ.
ಗುರುವಾರ ಪಾಯಿಂಟ್ 6ರಲ್ಲಿ ಅಸ್ಥಿಪಂಜರದ ಕುರುಹು ಸಿಕ್ಕ ಬೆನ್ನಲ್ಲೇ ತನಿಖೆಯ ಪ್ರಗತಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ಪಡೆದುಕೊಂಡಿದ್ದಾರೆ. ದೆಹಲಿಗೆ ತೆರಳುವ ಮುನ್ನ ಪೊಲೀಸ್ ಮಹಾನಿರ್ದೇಶಕ ಸಲೀಂ ಅವರಿಂದ ತನಿಖೆಯ ಮಾಹಿತಿ ಪಡೆದುಕೊಂಡಿದ್ದಾರೆ. ಇನ್ನೊಂದೆಡೆ, ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ, ಗೃಹ ಸಚಿವ ಪರಮೇಶ್ವರ್ ಅವರನ್ನು ಭೇಟಿಯಾಗಿದ್ದಾರೆ.
























