ಮಡಿಕೇರಿ: ಲಾರಿ ಮತ್ತು ಬೈಕ್ ನಡುವೆ ಕುಶಾಲನಗರದ ಶಿರಂಗಾಲ ಶ್ರೀ ಮಂಟಿಗಮ್ಮ ದೇವಾಲಯದ ಸಮೀಪ ಭೀಕರ ಅಪಘಾತ ನಡೆದಿದ್ದು, ಸ್ಕೂಟಿ ಸವಾರ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಚಾಮರಾಯನಕೋಟೆ ನಿವಾಸಿ ಅಶೋಕ್(36) ಮೃತ ದುರ್ದೈವಿ.
ಲಾರಿ ಕೊಣನೂರು ಕಡೆಯಿಂದ ಕುಶಾಲನಗರದತ್ತ ಬರುತ್ತಿದ್ದು, ಶಿರಂಗಾಲದಿಂದ ಕೊಣನೂರು ಕಡೆಗೆ ಸ್ಕೂಟಿ ಮೂಲಕ ಅಶೋಕ್ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಉಭಯ ವಾಹನಗಳ ನಡುವೆ ಅಪಘಾತ ಸಂಭವಿಸಿದ್ದು, ಗಂಭೀರ ಪ್ರಮಾಣದಲ್ಲಿ ಗಾಯಗೊಂಡ ಅಶೋಕ್ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
























