ಧರ್ಮಸ್ಥಳ: ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ SIT ಅಧಿಕಾರಿಗಳ ತಂಡ ಈಗಾಗಲೇ ಗುರುತು ಮಾಡಿದ ಸ್ಥಳಗಳನ್ನು ಅಗೆದು ಕಳೇಬರಗಳನ್ನು ಹೊರತೆಗೆಯುವ ಕೆಲಸಕ್ಕೆ ಇಳಿದಿದೆ.
ಶವಗಳನ್ನು ಹೂತಿಟ್ಟದ್ದಾಗಿ ಹೇಳಿರುವ ದೂರದಾರನ ಸಮ್ಮುಖದಲ್ಲೇ ಈ ಕೆಲಸ ನಡೆಯುತ್ತಿದ್ದು, ಕಾರ್ಮಿಕರ ಸಹಾಯದೊಂದಿಗೆ ಇಂದು ಮುಂಜಾನೆಯಿಂದಲೇ ಕೆಲಸ ಆರಂಭ ಮಾಡಲಾಗಿದೆ. ಗುರುತು ಮಾಡಲಾದ ಒಂದನೇ ಸ್ಥಳದಲ್ಲಿ ಈಗಾಗಲೇ ನಾಲ್ಕು ಅಡಿಗಳಷ್ಟು ಅಗೆಯಲಾಗಿದ್ದರೂ ಯಾವುದೇ ರೀತಿಯ ಶವಗಳ ಗುರುತು ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.
ಸತತ ಮೂರು ತಾಸುಗಳ ಕಾಲ ಅಗೆಯಲಾಗಿದ್ದರೂ ಇಲ್ಲಿ ಶವದ ಕುರುಹು ಪತ್ತೆಯಾಗಿಲ್ಲ. ಆದರೆ ಮಳೆಯ ಕಾರಣದಿಂದ ಅಗೆಯಲಾದ ಗುಂಡಿಯಲ್ಲಿ ನೀರು ತುಂಬಿದ್ದು, ಸದ್ಯ ಆ ಕಾರ್ಯಾಚರಣೆ ನಿಲ್ಲಿಸಲಾಗಿದೆ. ಒರತೆಯ ಕಾರಣದಿಂದ ನೀರು ತುಂಬುತ್ತಿದ್ದು ಅದನ್ನು ಜೆಸಿಬಿ ಸಹಾಯದಿಂದ ತೆರವು ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.
























