ನವದೆಹಲಿ: ಲೋಕಸಭೆಯಲ್ಲಿ ಭಾರತ ಪಾಕ್ ವಿರುದ್ದ ನಡೆಸಿದ ಆಪರೇಷನ್ ಸಿಂಧೂರ್ ಬಗ್ಗೆ ಚರ್ಚೆ ನಡೆದಿದ್ದು, ಈ ಸಂದರ್ಭದಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮಾಹಿತಿ ನೀಡಿದ್ದಾರೆ.
ಭಾರತವು ಈ ದಾಳಿಯ ಸಂದರ್ಭದಲ್ಲಿ ಕೇಂದ್ರೀಕರಿಸಿದ್ದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು. ಪಾಕಿಸ್ತಾನ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರವಾಗಿತ್ತು ಮತ್ತು ನಾವು ಆಗಿರಲಿಲ್ಲ. ನಮಗೆ ಸವಾಲಾಗಿ ಪರಿಣಮಿಸಿದ್ದು ಇದೇ ವಿಷಯವಾಗಿತ್ತು ಎಂದು ಹೇಳಿದ್ದಾರೆ.
ಪಾಕಿಸ್ತಾನವನ್ನು ಗಡಿಯಾಚೆಗಿನ ಉಗ್ರವಾದಕ್ಕೆ ಹೊಣೆ ಮಾಡುವುದಕ್ಕೆ ಭದ್ರತಾ ಮಂಡಳಿಯ ಅನುಮೋದನೆ ಪಡೆಯುವುದು, ಪಹಲ್ಗಾಮ್ ದಾಳಿಯನ್ನು ನಡೆಸಿದವರನ್ನು ನ್ಯಾಯದ ಕಟಕಟೆಯಲ್ಲಿ ನಿಲ್ಲಿಸುವುದು ಭಾರತದ ಗುರಿ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ಕ್ರಮಗಳನ್ನು ಸದನ ಅಂಗೀಕಾರ ಮಾಡುತ್ತದೆ ಎನ್ನುವ ಭರವಸೆಯನ್ನೂ ಜೈಶಂಕಕ್ ವ್ಯಕ್ತಪಡಿಸಿದ್ದಾರೆ.
ಹಾಗೆಯೇ ಎಪ್ರಿಲ್ 27 ರಿಂದ ಜೂನ್ 17 ರ ವರೆಗೆ ಪ್ರಧಾನಿ ಮೋದಿ ಮತ್ತು ಅಮೆರಿಕಾ ಅಧ್ಯಕ್ಷ ಟ್ರಂಪ್ ನಡುವೆ ಯಾವುದೇ ಮಾತುಕತೆ ನಡೆದಿಲ್ಲ. ಕದನ ವಿರಾಮಕ್ಕೆ ಸಂಬಂಧಿಸಿದಂತೆ ಅಮೆರಿಕಾ ಜೊತೆ ಯಾವುದೇ ಚರ್ಚೆ ನಡೆದಿಲ್ಲ ಎನ್ನುವ ಮೂಲಕ ಈ ಸಂಬಂಧ ತಲೆದೋರಿದ್ದ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಹಾಗೆಯೇ ಭಾರತ ಪಾಕ್‌ಗೆ ತಕ್ಕ ಶಾಸ್ತಿ ಮಾಡಲು ಆರಂಭಿಸಿದ ಬಳಿಕ ಪಾಕ್‌ನಿಂದ ಎಲ್ಲಾ ರೀತಿಯ ಆಕ್ರಮಣವನ್ನು ನಿಲ್ಲಿಸಲು ಬಯಸುವುದಾಗಿ ತಿಳಿಸಿ ಫೋನ್ ಕರೆಗಳು ಬಂದಿವೆ. ಆ ಸಂದರ್ಭದಲ್ಲಿ ಪಾಕಿಸ್ತಾನದ ಮಿಲಿಟರಿ ಮಹಾನಿರ್ದೇಶಕರಿಂದ ಔಪಚಾರಿಕವಾಗಿ ವಿನಂತಿಗಳು ಬರಬೇಕು ಎಂದು ಭಾರತ ಸ್ಪಷ್ಟವಾಗಿ ತಿಳಿಸಿದೆ ಎಂದಿದ್ದಾರೆ.
ಭಾರತ ಪಾಕ್‌ನ ಪರಮಾಣು ಬೆದರಿಕೆಗಳಿಗೆ ಹೆದರುವುದಿಲ್ಲ. ಆಪರೇಷನ್ ಸಿಂಧೂರ್ ಅನ್ನು ನಿಲ್ಲಿಸಲಾಗಿಲ್ಲ. ಅದು ಮುಂದುವರೆಯುತ್ತಿದೆ. ಪಹಲ್ಗಾಮ್ ದಾಳಿಯ ಹೊಣೆಯನ್ನು ಜಾಗತಿಕ ಉಗ್ರ ಸಂಘಟನೆ ಎಂದು ಘೋಷಿಸಲ್ಪಟ್ಟ TRF ವಹಿಸಿಕೊಂಡಿದೆ. ಆದರೆ ಇದನ್ನು ಪಾಕ್ ನಿರಾಕರಿಸಿದೆ. ಇದು ಪಾಕಿಸ್ತಾನ ಉಗ್ರರನ್ನು ಸಮರ್ಥನೆ ಮಾಡುತ್ತಿರುವುದಕ್ಕೆ ಸಾಕ್ಷಿ ಎಂ ದವರು ನುಡಿದಿದ್ದಾರೆ.
























