ಧರ್ಮಸ್ಥಳ ಪ್ರಕರಣ : ಇಂದೇ ಗುರುತಿಸಿದ ಸ್ಥಳಗಳ ಅಗೆತ ಕಾರ್ಯಾಚರಣೆ?

ಶವ ಹೂತು ಹಾಕಿದ 13 ಸ್ಥಳಗಳನ್ನು ತೋರಿಸಿದ ದೂರುದಾರ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ವಿವಿಧೆಡೆ ನೂರಾರು ಶವಗಳನ್ನು ಹೂತು ಹಾಕಿರುವುದಾಗಿ ಹೇಳಿಕೆ ನೀಡಿದ್ದ ವ್ಯಕ್ತಿ ಸೋಮವಾರ ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಸುತ್ತಲಿನ ಪ್ರದೇಶಗಳಲ್ಲಿ ತಾನು ಮೃತದೇಹಗಳನ್ನು ಹೂತು ಹಾಕಿರುವ 13 ಸ್ಥಳಗಳನ್ನು ತೋರಿಸಿದ್ದಾನೆ. ಪೊಲೀಸರು ಈ 13 ಸ್ಥಳಗಳನ್ನು ನಂಬರ್ ನೀಡಿ ಗುರುತಿಸಿದ್ದಾರೆ. ಅದರ ಸುತ್ತ ಟೇಪ್ ಕಟ್ಟಲಾಗಿದ್ದು ಈ ಸ್ಥಳಗಳಲ್ಲಿ ರಾತ್ರಿ ಪೊಲೀಸ್ ಗಸ್ತನ್ನು ಏರ್ಪಡಿಸಲಾಗಿತ್ತು.

ಮಂಗಳವಾರವೇ ಮೃತದೇಹಗಳನ್ನು ಹೂತು ಹಾಕಿದ ಸ್ಥಳಗಳಲ್ಲಿ ಅಗೆದು ಅವಶೇಷಗಳನ್ನು ಹೊರತೆಗೆಯುವ ಕಾರ್ಯ ಆರಂಭಿಸುವ ನಿರೀಕ್ಷೆಯಿದೆ. ಅದಕ್ಕಾಗಿ ಅಗತ್ಯವಿರುವ ಅನುಮತಿಗಳನ್ನು ಎಸ್.ಐ.ಟಿ ತಂಡ ಈಗಾಗಲೇ ಪಡೆದು ಕೊಂಡಿರುವುದಾಗಿ ತಿಳಿದು ಬಂದಿದೆ. ಆದರೆ ಹೂತು ಹಾಕಿರುವ ಸ್ಥಳಗಳನ್ನು ಗುರುತಿಸುವ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಮಂಗಳವಾರ ಬೆಳಗ್ಗೆ ಇದು ಆರಂಭಗೊಳ್ಳಲಿದ್ದು, ಅದು ಎಷ್ಟು ಗಂಟೆಗೆ ಮುಗಿಯುತ್ತದೆ ಎಂಬುದರ ಮೇಲೆ ಮುಂದಿನ ಕಾರ್ಯಾಚರಣೆಗಳು ನಿರ್ಧಾರವಾಗಲಿದೆ ಎನ್ನಲಾಗಿದೆ.





















































 
 

ದೂರುದಾರನ ಪರ ವಕೀಲರು ಈಗಾಗಲೇ ಬಿಡುಗಡೆ ಮಾಡಿದ್ದ ಹೇಳಿಕೆಯಲ್ಲಿ, ಕಲ್ಲೇರಿಯ ಪಟ್ರೋಲ್ ಪಂಪ್ ಸಮೀಪ ಹಾಗೂ ಇತರೆಡೆಗಳಲ್ಲಿಯೂ ಮೃತದೇಹಗಳನ್ನು ಹೂತು ಹಾಕಿರುವುದಾಗಿ ಹೇಳಿಕೆ ನೀಡಿದ್ದ. ಈ ಪ್ರದೇಶದಲ್ಲಿ ಇನ್ನೂ ಯಾವುದೇ ಸ್ಥಳಗಳನ್ನು ಗುರುತಿಸುವ ಕಾರ್ಯ ಮಾಡಲಾಗಿಲ್ಲ. ಈ ಹಿನ್ನಲೆಯಲ್ಲಿ ಮಂಗಳವಾರ ಈ ಪ್ರದೇಶದಲ್ಲಿ ಮೃತದೇಹಗಳನ್ನು ಹೂತು ಹಾಕಿರುವ ಜಾಗಗಳನ್ನು ಗುರುತಿಸುವ ಕಾರ್ಯ ನಡೆಯುವ ನಿರೀಕ್ಷೆಯಿದೆ.

ಧರ್ಮಸ್ಥಳ ನೇತ್ರಾವತಿ ಸ್ನಾನಘಟ್ಟದ ಪರಿಸರದಲ್ಲಿಯೇ ನಿನ್ನೆ 13 ಸ್ಥಳಗಳನ್ನು ಆತ ಗುರುತಿಸಲಾಗಿದೆ. ಸ್ನಾನಘಟ್ಟದ ಒಳಗೆ ನದಿ ಬದಿಯಲ್ಲಿ ಮೊದಲ ಸ್ಥಳವನ್ನು ಆತ ಗುರುತಿಸಿದ್ದಾನೆ. ಅಲ್ಲಿಂದ ಮುಂದೆ ಅರಣ್ಯದೊಳಗೆ ಆತನೊಂದಿಗೆ ಎಸ್.ಐ.ಟಿ ತಂಡದವರು ತೆರಳಿದ್ದು ಅಲ್ಲಿ ಆತ ಎಂಟು ಸ್ಥಳಗಳನ್ನು ಗುರುತಿಸಿದ್ದಾನೆ.

ಇದಾದ ಬಳಿಕ ನೇತ್ರಾವತಿ ಸ್ನಾಘಟ್ಟದಿಂದ ನೂರು ಮೀಟರ್ ಮುಂದೆ ಧರ್ಮಸ್ಥಳ ಉಜಿರೆ ರಸ್ತೆಯ ಬದಿಯಲ್ಲಿ ಹೆದ್ದಾರಿಯಿಂದ ಎರಡು ಮೂರು ಮೀಟರ್ ದೂರದಲ್ಲಿ ಈತ ಮೂರು ಸ್ಥಳಗಳನ್ನು ಗುರುತಿಸಿದ್ದಾನೆ. ಮುಂದೆ ನೇತ್ರಾವತಿ ಸ್ನಾನಘಟ್ಟದಿಂದ ಅಜಿಕುರಿಗೆ ಹೋಗುವ ರಸ್ತೆಯ ಬದಿಯಲ್ಲಿ ಕಿಂಡಿ ಅಣೆಕಟ್ಟಿಗೆ ತಾಗಿಕೊಂಡಿರುವ ಪ್ರದೆಶದಲ್ಲಿ ಮತ್ತೊಂದು ಸ್ಥಳವನ್ನು ಗುರುತಿಸಿದ್ದಾನೆ. ಇಲ್ಲಿ ಸ್ಥಳದ ಸುತ್ತ ದೊಡ್ಡದಾದ ಮಾರ್ಕ್ ಮಾಡಲಾಗಿದೆ.

ಇದಾದ ಬಳಿಕ ದೂರುದಾರ ಎಸ್.ಐ.ಟಿ ತಂಡವನ್ನು ಧರ್ಮಸ್ಥಳ ಕನ್ಯಾಡಿಯ ಒಳಪ್ರದೇಶದಲ್ಲಿ ಖಾಸಗಿ ಜಾಗವೊಂದಕ್ಕೆ ಕರೆದೊಯ್ದಿದ್ದು ಅಲ್ಲಿ ಸ್ಥಳವೊಂದನ್ನು ತೋರಿಸಿದ್ದಾನೆ. ಈ ವೇಳೆಗೆ ಸಂಜೆಯಾಗಿದ್ದು ಮಳೆಯೂ ಬಂದ ಕಾರಣ ಇಲ್ಲಿ ಸ್ಥಳವನ್ನು ಗುರುತಿಸುವ ಕಾರ್ಯ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ.

error: Content is protected !!
Scroll to Top