ಸುದೀರ್ಘ 16 ತಾಸುಗಳ ಚರ್ಚೆಗೆ ಸರ್ಕಾರ-ವಿಪಕ್ಷ ರೆಡಿ
ನವದೆಹಲಿ: ಪಹಲ್ಗಾಮ್ ಉಗ್ರ ದಾಳಿ ಮತ್ತು ಆಪರೇಷನ್ ಸಿಂದೂರ ಕುರಿತು ಸೋಮವಾರ ಲೋಕಸಭೆಯಲ್ಲಿ ಮೂರು ದಿನಗಳ ಚರ್ಚೆ ಆರಂಭವಾಗಲಿದ್ದು, ಆಡಳಿತ ಮೈತ್ರಿಕೂಟ ಮತ್ತು ವಿರೋಧ ಪಕ್ಷಗಳು ಪರಸ್ಪರ ವಾಗ್ದಾಳಿಗೆ ಸಿದ್ಧತೆ ಮಾಡಿಕೊಂಡಿವೆ. ಕಾಂಗ್ರೆಸ್ ನಿನ್ನೆ ತನ್ನ ಸಂಸದರಿಗೆ ಲೋಕಸಭೆಯಲ್ಲಿ ಇಂದಿನಿಂದ ಕಡ್ಡಾಯವಾಗಿ ಹಾಜರಿರುವಂತೆ ವಿಪ್ ಜಾರಿ ಮಾಡಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಚರ್ಚೆ ಶುರು ಮಾಡಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಆಪರೇಷನ್ ಸಿಂದೂರ ಕುರಿತು ಲೋಕಸಭೆಯಲ್ಲಿ 16 ಗಂಟೆ ಹಾಗೂ ರಾಜ್ಯಸಭೆಯಲ್ಲಿ 9 ಗಂಟೆಗಳ ಕಾಲ ಚರ್ಚೆಗೆ ಸಮಯ ನಿಗದಿಪಡಿಸಲಾಗಿದೆ. ಇಂದು ಲೋಕಸಭೆಯಲ್ಲಿ ಚರ್ಚೆ ನಡೆಯಲಿದ್ದು, ಪ್ರಧಾನಿ ಮೋದಿ ಮಾತನಾಡಲಿದ್ದಾರೆ.
ಸಂಸತ್ ಮೂಲಗಳ ಪ್ರಕಾರ ರಾಜನಾಥ್ ಸಿಂಗ್ ಸಿಡಿಎಸ್ ಜನರಲ್ ಅನಿಲ್ ಚೌಹಾಣ್, ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಮತ್ತು ಮೂರು ಸೇನಾಪಡೆಗಳ ಮುಖ್ಯಸ್ಥರೊಂದಿಗೆ ಹಲವು ಸುತ್ತಿನ ಸಭೆಗಳನ್ನು ನಡೆಸಲಿದ್ದಾರೆ. ಈ ಸಭೆಯಲ್ಲಿ ಸರ್ಕಾರದ ಕಾರ್ಯತಂತ್ರಗಳನ್ನು ಅಂತಿಮಗೊಳಿಸಲಾಗುತ್ತದೆ. ಇದೇ ವೇಳೆ ಚರ್ಚೆಯಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಇಂಡಿ ಒಕ್ಕೂಟ ಸಹ ಸಭೆ ನಡೆಸಲಿದೆ.
ಆಪರೇಷನ್ ಸಿಂದೂರ ಕಾರ್ಯಾಚರಣೆ ಬಗ್ಗೆ ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದ ವಿಪಕ್ಷಗಳು ಚರ್ಚೆಗೆ ಪಟ್ಟು ಹಿಡಿದಿದ್ದವು. ಪ್ರಧಾನಿ ಮೋದಿ ವಿದೇಶಿ ಪ್ರವಾಸದಲ್ಲಿದ್ದ ಕಾರಣ, ಚರ್ಚೆಯನ್ನು ಒಂದು ವಾರ ಮುಂದೂಡಲಾಗಿತ್ತು. ಇದೀಗ ಪ್ರಧಾನಿ ವಿದೇಶಿ ಪ್ರವಾಸ ಮುಗಿಸಿ ವಾಪಸ್ ಆದ ಬೆನ್ನಲ್ಲೇ ಚರ್ಚೆಗೆ ತಯಾರಿ ನಡೆದಿದೆ.
ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾದ ದಿನದಿಂದ ವಿರೋಧ ಪಕ್ಷ ಮತ್ತು ಆಡಳಿತ ಪಕ್ಷಗಳ ಪೀಠಗಳ ನಡುವಿನ ಬಿಕ್ಕಟ್ಟಿನ ನಂತರ, ಇಂದು ಅಧಿವೇಶನ ನಡೆಯುತ್ತಿದ್ದು ಮಹತ್ವದ ಚರ್ಚೆ ನಡೆಯಬಹುದೆಂದು ನಿರೀಕ್ಷಿಸಲಾಗಿದೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಾಳೆ ಮಾತನಾಡಬಹುದು. ಈ ವಿಷಯದ ಕುರಿತು ಮಾತನಾಡಲು ಪಕ್ಷಕ್ಕೆ ಮೂರು ಗಂಟೆಗಳ ಸಮಯವನ್ನು ನಿಗದಿಪಡಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಭದ್ರತೆಯ ಬಗ್ಗೆ ತಮ್ಮ ಸರ್ಕಾರದ ದೃಢ ನಿಲುವಿನ ದಾಖಲೆಯನ್ನು ತಿಳಿಸಲು ಮಧ್ಯಪ್ರವೇಶಿಸಬಹುದು ಎಂಬ ಸೂಚನೆಗಳ ನಡುವೆ, ರಾಜನಾಥ್ ಸಿಂಗ್ ಅವರಲ್ಲದೆ, ಗೃಹ ಸಚಿವ ಅಮಿತ್ ಶಾ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಈ ವಿಷಯಗಳ ಕುರಿತು ಮಾತನಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
























