ಒಂಟಿ ಸಲಗ ಕಂಡು ಬಸ್‌ಗಾಗಿ ಕಾಯುತ್ತಿದ್ದ ಶಾಲಾ ಮಕ್ಕಳು ಭಯಭೀತ
ಬೆಳ್ತಂಗಡಿ : ಧರ್ಮಸ್ಥಳ ಸಮೀಪದ ಬೊಳಿಯಾರ್‌ನಲ್ಲಿ ಇಂದು ಬೆಳಗ್ಗೆ ಒಂಟಿ ಸಲಗವೊಂದು ಬಸ್ ತಂಗುದಾಣಕ್ಕೆ ನುಗ್ಗಿ ಬಂದು ಆತಂಕ ಸೃಷ್ಟಿಸಿದೆ.
ರಸ್ತೆ ಬದಿ ಬಸ್ ತಂಗುದಾಣದಲ್ಲಿ ಶಾಲಾ ಮಕ್ಕಳು ಬಸ್‌ಗಾಗಿ ಕಾಯುತ್ತಿದ್ದ ವೇಳೆ ರಸ್ತೆಯಲ್ಲಿ ಪ್ರತ್ಯಕ್ಷವಾದ ಬೃಹತ್ ಗಾತ್ರದ ಒಂಟಿ ಸಲಗ ಬಸ್ ತಂಗುದಾಣದ ಕಡೆಗೆ ನುಗ್ಗಿ ಬಂದಿದೆ. ತಂಗುದಾಣದಲ್ಲಿದ್ದ ಮಕ್ಕಳು ಬೃಹತ್ ಗಾತ್ರದ ಆನೆಯನ್ನು ಕಂಡು ಭಯಭೀತರಾಗಿ ಹತ್ತಿರದಲ್ಲಿದ್ದ ಅಂಗಡಿಯೊಳಗೆ ನುಗ್ಗಿ ಪಾರಾಗಿದ್ದಾರೆ.
ಬಳಿಕ ಆನೆ ಕಾಡಿನತ್ತ ಸಂಚರಿಸಿದ್ದು, ಸ್ವಲ್ಪದರಲ್ಲೇ ಸಂಭವನೀಯ ಅಪಾಯ ತಪ್ಪಿದೆ. ಕಳೆದ ಎರಡು ವಾರಗಳ ಹಿಂದೆಯಷ್ಟೆ ಕೊಕ್ಕಡ ಸೌತಡ್ಕ ಸಮೀಪದ ಗುಂಡಿ ಎಂಬಲ್ಲಿ ವ್ಯಕ್ತಿಯೊಬ್ಬರನ್ನು ಕಾಡಾನೆ ದಾಳಿ ಮಾಡಿ ಕೊಂದಿದ್ದು, ಈ ನಡುವೆ ಒಂಟಿ ಸಲಗ ಪ್ರತ್ಯಕ್ಷವಾಗಿರುವುದು ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.
























