ತಲೆ ಬುರುಡೆ ರಹಸ್ಯ ಬೇಧಿಸುವ ನಿಟ್ಟಿನಲ್ಲಿ ತನಿಖೆ
ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದು ದೂರು ನೀಡಿದ್ದ ವ್ಯಕ್ತಿಯನ್ನು ಎರಡನೇ ದಿನವೂ ಎಸ್‌ಐಟಿ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಎರಡನೇ ದಿನವಾದ ಭಾನುವಾರ ವಿಶೇಷ ತನಿಖಾ ತಂಡದ ಮುಖ್ಯಸ್ಥ ಪ್ರಣವ್ ಮೊಹಾಂತಿ ಅವರೇ ಸ್ವತಃ ವಿಚಾರಣೆ ನಡೆಸಿದ್ದಾರೆ. ಶನಿವಾರ ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಐಬಿಯಲ್ಲಿ ಎಸ್‌ಐಟಿ ಅಧಿಕಾರಿ ಡಿಐಜಿ ಅನುಚೇತ್ ನೇತೃತ್ವದಲ್ಲಿ ಎಂಟು ಗಂಟೆಗಳ ಕಾಲ ನಿರಂತರ ವಿಚಾರಣೆ ನಡೆಸಲಾಗಿತ್ತು.
ಈವರೆಗೆ ನಡೆದ ವಿಚಾರಣೆಯ ಮಾಹಿತಿ ಪಡೆದ ಬಳಿಕ ಸಾಕಷ್ಟು ವಿಚಾರಗಳನ್ನು ಆತನಿಂದ ಕೆದಕಿರುವ ಮೊಹಾಂತಿ ಆತನಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಅನಾಮಿಕ ವ್ಯಕ್ತಿಯ ವೈಯಕ್ತಿಕ ವಿಚಾರ, ಆತನ ಕುಟುಂಬದ ಬಾಲಕಿಗೆ ನಡೆದಿದೆ ಎಂದು ಹೇಳಿದ್ದ ಲೈಂಗಿಕ ಕಿರುಕುಳದ ಬಗ್ಗೆಯೂ ವಿಚಾರಣೆ ನಡೆಸಿದ್ದಾರೆ.
ನ್ಯಾಯಾಲಯಕ್ಕೆ ಹಾಜರುಪಡಿಸಿದ ತಲೆ ಬರುಡೆಯನ್ನು ಕಾನೂನುಬಾಹಿರವಾಗಿ ಹೊರತೆಗೆದ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆಯುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ನೂರಾರು ಶವ ಹೂತು ಹಾಕಿದ್ದ ವೇಳೆ ನಿನ್ನ ಜೊತೆ ಇದ್ದವರು ಯಾರು?, ಮೃತದೇಹ ಹೂತುಹಾಕಲು ಬಲವಂತಪಡಿಸಿದ ಮೇಲ್ವಿಚಾರಕರ ಹೆಸರೇನು?, ಅವರು ಇನ್ನೂ ಜೀವಂತವಾಗಿ ಇದ್ದಾರೆಯೇ?, ನ್ಯಾಯಾಲಯಕ್ಕೆ ಹಾಜರುಪಡಿಸಿದ ತಲೆ ಬುರುಡೆ ತಂದದ್ದು ಎಲ್ಲಿಂದ, ಆ ವೇಳೆ ನಿಮ್ಮ ಜೊತೆ ಯಾರಿದ್ದರು?, ತಲೆ ಬುರುಡೆ ಯಾರದ್ದು ಎನ್ನುವ ಬಗ್ಗೆ ಖಚಿತವಾಗಿ ಗೊತ್ತಾ?, ನೀವು ಹೂತು ಹಾಕಿದ್ದ ಮೃತದೇಹಗಳ ಪೈಕಿ ನಿಮಗೆ ಪರಿಚಿತ ವ್ಯಕ್ತಿಗಳ ಮೃತದೇಹ ಇತ್ತಾ?, ತಲೆ ಬುರುಡೆಯನ್ನು ಹೊರತೆಗೆಯುವ ವೇಳೆ ನೀವು ಒಬ್ಬರೇ ಇದ್ದದ್ದಾ?, ಮಣ್ಣಿನಡಿಯಲ್ಲಿದ್ದ ತಲೆ ಬುರುಡೆ ಹೊರ ತೆಗೆಯಲು ನಿಮ್ಮಿಂದ ಓರ್ವರಿಂದಲೇ ಹೇಗೆ ಸಾಧ್ಯ?, ನಿಮಗೆ ಸಹಕರಿಸಿದರು ಯಾರು, ಎಷ್ಟು ಮಂದಿ ಇದ್ದರು?, ತಲೆ ಬುರುಡೆ ತೆಗೆಯುವ ವೇಳೆ ಮೊಬೈಲ್ ವಿಡಿಯೋ ಮಾಡಿದ್ದು ಯಾರು? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಆತನ ವೈಯಕ್ತಿಕ ವಿಚಾರವನ್ನೂ ಕೇಳಿದ್ದಾರೆ. 2014ರಲ್ಲಿ ಮೇಲ್ವಿಚಾರಕರ ಸಂಪರ್ಕದಲ್ಲಿದ್ದ ವ್ಯಕ್ತಿಯೊಬ್ಬನಿಂದ ನನ್ನ ಕುಟುಂಬದ ಬಾಲಕಿಗೆ ಲೈಂಗಿಕ ಕಿರುಕುಳ ಆಗಿತ್ತು. ಡಿಸೆಂಬರ್ 2014ರಲ್ಲಿ ನಾನು ನನ್ನ ಕುಟುಂಬದೊಂದಿಗೆ ಧರ್ಮಸ್ಥಳದಿಂದ ಓಡಿ ಹೋದೆ ಎಂದು ಶನಿವಾರ ಅನಾಮಿಕ ವ್ಯಕ್ತಿ ವಿಚಾರಣೆ ವೇಳೆ ಎಸ್‌ಐಟಿ ಅಧಿಕಾರಿಗಳ ಮುಂದೆ ಹೇಳಿದ್ದರು. ಹೀಗಾಗಿ ಈ ಪ್ರಕರಣದ ಬಗ್ಗೆಯೂ ಡಿಜಿಪಿ ಪ್ರಣವ್ ಮೊಹಾಂತಿ ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
























