ಭಾರತಿ ಬಿಲ್ಡರ್ಸ್ ಕಚೇರಿ ಮೇಲೆ ರವಿ ಪೂಜಾರಿ ಗ್ಯಾಂಗ್ ನಡೆಸಿದ ಶೂಟೌಟ್ ಪ್ರಕರಣ
ಮಂಗಳೂರು : 2014ರಲ್ಲಿ ಮಂಗಳೂರಿನಲ್ಲಿ ಸಂಭವಿಸಿದ್ದ ಶೂಟೌಟ್ ಪ್ರಕರಣದ ಆರೋಪಿಯನ್ನು ಹತ್ತು ವರ್ಷಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಕರಾಡ್‌ನ ಗಣೇಶ್ ಲಕ್ಷ್ಮಣ್ ಸಕಟ್ ಎಂಬಾತನನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.
ಬಿಜೈಯ ಭಾರತಿ ಬಿಲ್ಡರ್ಸ್ ಕಚೇರಿ ಮೇಲೆ ಭೂಗತ ಪಾತಕಿ ರವಿ ಪೂಜಾರಿ ಸಹಚರರು 2014ರಲ್ಲಿ ಶೂಟೌಟ್ ನಡೆಸಿದ್ದರು. ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಆರೋಪಿಯಾಗಿದ್ದ ಕರಾಡ್ ಗಣೇಶ್ 2015ರಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ ಮಂಗಳೂರಿನ ಜೆಎಂಎಫ್‌ಸಿ 3ನೇ ನ್ಯಾಯಾಲಯ ವಾರಂಟ್ ಹೊರಡಿಸಿತ್ತು.
ಆರೋಪಿಯ ವಿರುದ್ಧ ಕಾವೂರು ಪೊಲೀಸ್ ಠಾಣೆ ಹಾಗೂ ಮಹಾರಾಷ್ಟ್ರದ ಕರಾಡ್ ಠಾಣೆಯಲ್ಲೂ ಪ್ರಕರಣಗಳು ದಾಖಲಾಗಿವೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.
ಪೊಲೀಸ್ ಆಯುಕ್ತ ಸುಧೀರ್ ಕುಮಾರ ರೆಡ್ಡಿಯವರ ಮಾರ್ಗದರ್ಶನದಲ್ಲಿ ಉರ್ವ ಪೊಲೀಸರು ಆರೋಪಿಯನ್ನು ಮಹಾರಾಷ್ಟ್ರದ ಪಂಡರಾಪುರ ಎಂಬಲ್ಲಿ ಬಂಧಿಸಿದ್ದಾರೆ.
























