4ನೇ ಟೆಸ್ಟ್‌ : ಸೋಲಿನ ದವಡೆಯಿಂದ ಪಾರಾಗಿ ಡ್ರಾ ಸಾಧಿಸಿದ ಭಾರತ

ಇಂಗ್ಲೆಂಡ್‌ ಗೆಲುವಿನಾಸೆಗೆ ತಣ್ಣೀರೆರಚಿದ ಗಿಲ್‌, ಜಡೇಜಾ, ಸುಂದರ್‌ ಶತಕ

ಮ್ಯಾಂಚೆಸ್ಟರ್‌: ಇಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್‌ ನಡುವಿನ ನಾಲ್ಕನೇ ಪಂದ್ಯವನ್ನು ಸೋಲಿನ ದವಡೆಯಿಂದ ಪಾರು ಮಾಡಿ ಡ್ರಾ ಮಾಡಿಕೊಳ್ಳಲು ಭಾರತ ಯಶಸ್ವಿಯಾಗಿದೆ. ನಾಯಕ ಶುಭಮನ್‌ ಗಿಲ್‌, ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್‌ ಸುಂದರ್‌ ಅವರ ಅಜೇಯ ಶತಕದ ನೆರವಿನಿಂದ 4ನೇ ಟೆಸ್ಟ್‌ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ 311 ರನ್‌ ಮುನ್ನಡೆ ಪಡೆದ ಕಾರಣ ಭಾರತದ ಬ್ಯಾಟರ್‌ಗಳು ಎರಡನೇ ಇನ್ನಿಂಗ್ಸ್‌ನಲ್ಲಿ ಎಚ್ಚರಿಕೆಯಿಂದ ಆಟವಾಡಿ ಡ್ರಾದತ್ತ ಪಂದ್ಯವನ್ನು ಕೊಂಡೊಯ್ದರು. ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ದೊಡ್ಡ ಮುನ್ನಡೆ ಸಾಧಿಸಿದ್ದರೂ, ಶುಭ್‌ಮನ್ ಗಿಲ್, ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಅವರ ಅದ್ಭುತ ಶತಕಗಳಿಂದ ಭಾರತ ತಂಡ ಸೋಲನ್ನು ತಪ್ಪಿಸಿತು. ಕೆ.ಎಲ್. ರಾಹುಲ್ ಅವರ 90 ರನ್‌ಗಳ ಇನ್ನಿಂಗ್ಸ್ ಕೂಡ ಮಹತ್ವದ ಪಾತ್ರ ವಹಿಸಿತು.





















































 
 

ಎರಡನೇ ಇನ್ನಿಂಗ್ಸ್‌ನಲ್ಲಿ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿದ ಟೀಂ ಇಂಡಿಯಾ ಟೆಸ್ಟ್ ಪಂದ್ಯವನ್ನು ಡ್ರಾದಲ್ಲಿ ಅಂತ್ಯಗೊಳಿಸುವಲ್ಲಿ ಯಶಸ್ವಿಯಾಗಿದೆ. ಇಡೀ ಪಂದ್ಯದಲ್ಲಿ ಮೇಲುಗೈ ಸಾಧಿಸಿದ್ದ ಇಂಗ್ಲೆಂಡ್‌ ತಂಡ, ಎರಡನೇ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ ನೀಡಿದ ಪ್ರದರ್ಶನದ ಮುಂದೆ ಸಂಪೂರ್ಣವಾಗಿ ಶರಣಾಯಿತು. ಟೆಸ್ಟ್ ಪಂದ್ಯದ ಕೊನೆಯ ದಿನದಂದು ಶುಭ್​ಮನ್ ಗಿಲ್, ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಅವರ ಅದ್ಭುತ ಶತಕಗಳ ಆಧಾರದ ಮೇಲೆ ಟೀಂ ಇಂಡಿಯಾ ಇಂಗ್ಲೆಂಡ್‌ನ ಮುನ್ನಡೆಯನ್ನು ಕೊನೆಗೊಳಿಸಿ ಇಡೀ ದಿನ ಬ್ಯಾಟಿಂಗ್ ಮಾಡುವ ಮೂಲಕ ಸೋಲನ್ನು ತಪ್ಪಿಸಿತು.

ಓಲ್ಡ್ ಟ್ರಾಫರ್ಡ್‌ನಲ್ಲಿ ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 311 ರನ್‌ಗಳ ಮುನ್ನಡೆ ಸಾಧಿಸಿತ್ತು. ಆ ಬಳಿಕ ಭಾರತದ ಎರಡನೇ ಇನ್ನಿಂಗ್ಸ್​ನ ಮೊದಲ ಓವರ್‌ನಲ್ಲಿಯೇ ಎರಡು ವಿಕೆಟ್‌ಗಳನ್ನು ಪಡೆದುಕೊಂಡಿತು. ಇಲ್ಲಿಂದ ಟೀಂ ಇಂಡಿಯಾದ ಸೋಲು ಖಚಿತವೆಂದು ತೋರುತ್ತಿತ್ತು. ಆದರೆ ಪಂದ್ಯದ ಕೊನೆಯ 5 ಸೆಷನ್​ಗಳಲ್ಲಿ ಶುಭ್​ಮನ್ ಗಿಲ್, ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಶತಕ ಅವರ ಶತಕ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಅವರ 90 ರನ್​ಗಳ ಕೊಡುಗೆ ತಂಡವನ್ನು ಸೋಲಿನ ದವಡೆಯಿಂದ ಹೊರತಂದಿತು.

ವಾಸ್ತವವಾಗಿ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು, ನಾಯಕ ಗಿಲ್ ಮತ್ತು ರಾಹುಲ್ 174 ರನ್‌ಗಳ ಅದ್ಭುತ ಜೊತೆಯಾಟವನ್ನಾಡುವ ಮೂಲಕ ಟೀಂ ಇಂಡಿಯಾದ ಡ್ರಾ ಭರವಸೆಯನ್ನು ಹೆಚ್ಚಿಸಿದ್ದರು. ಆದರೆ ಕೊನೆಯ ದಿನದಂದು ತಂಡಕ್ಕೆ ಮೊದಲ ಸೆಷನ್‌ನಲ್ಲಿಯೇ ಆಘಾತ ಎದುರಾಯಿತು. ಬೆನ್ ಸ್ಟೋಕ್ಸ್ ಎಸೆತದಲ್ಲಿ ರಾಹುಲ್ ವಿಕೆಟ್ ಒಪ್ಪಿಸುವ ಮೂಲಕ ಇಂಗ್ಲೆಂಡ್​ ಗೆಲುವಿನ ನಿರೀಕ್ಷೆಯನ್ನು ಹೆಚ್ಚಿಸಿದರು.

ರಾಹುಲ್ ವಿಕೆಟ್ ಬಳಿಕವೂ ಹೋರಾಟ ಬಿಡದ ಗಿಲ್ ಈ ಸರಣಿಯಲ್ಲಿ ತಮ್ಮ ನಾಲ್ಕನೇ ಶತಕವನ್ನು ಪೂರೈಸಿದರು. ಆದಾಗ್ಯೂ ಮೊದಲ ಸೆಷನ್ ಮುಗಿಯುವ ಸ್ವಲ್ಪ ಮೊದಲು ಜೋಫ್ರಾ ಆರ್ಚರ್ ಗಿಲ್ ಅವರನ್ನು ಔಟ್ ಮಾಡುವ ಮೂಲಕ ಟೀಂ ಇಂಡಿಯಾವನ್ನು ಮತ್ತೆ ಸಂಕಷ್ಟಕ್ಕೆ ಸಿಲುಕಿಸಿದರು. ಕ್ರೀಸ್‌ಗೆ ಬಂದ ರವೀಂದ್ರ ಜಡೇಜಾ ಕೂಡ ಮೊದಲ ಎಸೆತದಲ್ಲೇ ಸ್ಲಿಪ್‌ನಲ್ಲಿ ಕ್ಯಾಚ್ ನೀಡಿದರು. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಫೀಲ್ಡರ್ ಜೋ ರೂಟ್ ಈ ಕ್ಯಾಚ್ ಹಿಡಿಯುವಲ್ಲಿ ಎಡವಿದರು.

ಈ ಜೀವದಾನದ ಸಂಪೂರ್ಣ ಲಾಭ ಪಡೆದ ಜಡೇಜಾ, ಸುಂದರ್ ಜೊತೆಗೂಡಿ ಇಂಗ್ಲೆಂಡ್‌ನಿಂದ ಜಯವನ್ನು ಕಸಿದುಕೊಂಡರು. ಈ ಇನ್ನಿಂಗ್ಸ್‌ನಲ್ಲಿ ಗಾಯಗೊಂಡ ರಿಷಭ್ ಪಂತ್ ಬದಲಿಗೆ ಬಡ್ತಿ ಪಡೆದು ಬ್ಯಾಟಿಂಗ್​ಗೆ ಬಂದಿದ್ದ ಸುಂದರ್‌ ಕೂಡ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದರು. ಸುಂದರ್ ಮತ್ತು ಜಡೇಜಾ ಕೊನೆಯ ಎರಡು ಸೆಷನ್​ಗಳಲ್ಲಿ ಒಟ್ಟು 334 ಎಸೆತಗಳನ್ನು ಎದುರಿಸಿ 203 ರನ್‌ಗಳ ಅಜೇಯ ಪಾಲುದಾರಿಕೆಯನ್ನು ಹಂಚಿಕೊಂಡರು. ಜೊತೆಗೆ ಇಬ್ಬರೂ ತಮ್ಮ ತಮ್ಮ ಶತಕಗಳನ್ನು ಪೂರೈಸಿದರು.

ಈ ಪಂದ್ಯದಲ್ಲಿ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್ ಮತ್ತು ರಿಷಭ್ ಪಂತ್ ಅವರ ಅರ್ಧಶತಕದ ಇನ್ನಿಂಗ್ಸ್‌ನ ಆಧಾರದ ಮೇಲೆ ಮೊದಲ ಇನ್ನಿಂಗ್ಸ್​ನಲ್ಲಿ 358 ರನ್ ಗಳಿಸಿತು. ಇತ್ತ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್​ನಲ್ಲಿ 669 ರನ್ ಗಳಿಸಿ 311 ರನ್‌ಗಳ ಮುನ್ನಡೆ ಸಾಧಿಸಿತು. ಇದರ ನಂತರ, ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ಗಳಿಗೆ 425 ರನ್ ಗಳಿಸಿ ಪಂದ್ಯವನ್ನು ಡ್ರಾದಲ್ಲಿ ಕೊನೆಗೊಳಿಸಿತು. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ಇನ್ನೂ 1-2 ಅಂತರದಿಂದ ಮುನ್ನಡೆ ಪಡೆದುಕೊಂಡಿದೆ.

error: Content is protected !!
Scroll to Top