ಎಲ್ಲ ಆನ್ಲೈನ್ ಪೇಮೆಂಟ್ ವ್ಯವಸ್ಥೆಗೆ ಅನ್ವಯ
ನವದೆಹಲಿ : ಜಗತ್ತಿನ ನಂಬರ್ 1 ಪಾವತಿ ವ್ಯವಸ್ಥೆಯಾಗಿರುವ ಯುಪಿಐಯಲ್ಲಿ ಆಗಸ್ಟ್ 1, 2025ರಿಂದ ಹಲವು ಬದಲಾವಣೆಗಳಾಗಲಿವೆ. ಯುಪಿಐಯಲ್ಲಿ ಹೊಸ ನಿಯಮಗಳು ಜಾರಿ ಆಗಲಿವೆ. ಯುಪಿಐ ಪಾವತಿ ವೇಗ, ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯ ಸುಧಾರಣೆ ದೃಷ್ಟಿಯಿಂದ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಈ ಬದಲಾವಣೆಗಳನ್ನು ಮಾಡುತ್ತಿದೆ. ಗೂಗಲ್ ಪೇ, ಫೋನ್ ಪೇ ಸೇರಿದಂತೆ ಎಲ್ಲ ರೀತಿಯ ಯುಪಿಐ ಆಧಾರಿತ ಪಾವತಿ ವ್ಯವಸ್ಥೆಗೆ ಇದು ಅನ್ವಯವಾಗಲಿದೆ.
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ಪ್ರಕಾರ, ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಯುಪಿಐ ಕುರಿತು ತುಂಬಾ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಜನರು ಆಗಾಗ ಬ್ಯಾಲೆನ್ಸ್ ಚೆಕ್ ಮಾಡುತ್ತಿದ್ದರು ಹಾಗೂ ವಹಿವಾಟಿನ ಸ್ಥಿತಿಯನ್ನ ಕೂಡ ನೋಡುತ್ತಿದ್ದರು. ಇದರಿಂದ ಸರ್ವರ್ ಮೇಲೆ ವಿಪರೀತ ಒತ್ತಡ ಬಿದ್ದು, ವಹಿವಾಟುಗಳು ನಿಧಾನ ಆಗುತ್ತಿದ್ದವು ಅಥವಾ ಫೇಲ್ ಎಂದು ತೋರಿಸುತ್ತಿದ್ದವು. ಆದ್ದರಿಂದ ಈ ವ್ಯವಸ್ಥೆಯನ್ನು ಸುಧಾರಿಸಲು ಹೊಸ ನಿಯಮಗಳನ್ನು ಜಾರಿ ಮಾಡಲಾಗುತ್ತಿದೆ.
ಹೊಸ ನಿಯಮ
- ಹೊಸ ನಿಯಮದ ಪ್ರಕಾರ ಒಂದು ದಿನದಲ್ಲಿ ಗರಿಷ್ಠ 50 ಬಾರಿ ಮಾತ್ರ ಬ್ಯಾಲೆನ್ಸ್ ಚೆಕ್ ಮಾಡಬಹುದು.
- ಒಂದು ಮೊಬೈಲ್ ಸಂಖ್ಯೆಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ಮಾಹಿತಿಯನ್ನು ದಿನಕ್ಕೆ 25 ಬಾರಿ ಮಾತ್ರ ವೀಕ್ಷಣೆ ಮಾಡಬಹುದು.
- ಆಟೋ ಪೇ ವಹಿವಾಟುಗಳಿಗೆ ನಿಗದಿತ ಸಮಯ ಸ್ಲಾಟ್ಗಳು ಇರುತ್ತವೆ.
- ವಹಿವಾಟಿನ ಸ್ಥಿತಿಯನ್ನು ಪರಿಶೀಲನೆ ಮಾಡುವುದಕ್ಕೂ ಮಿತಿ ಇರಲಿದ್ದು, ಪ್ರತಿ 90 ಸೆಕೆಂಡ್ಗೆ ಒಂದು ಸಲ ಮಾತ್ರ ಪರಿಶೀಲಿಸಬಹುದು
- ವಹಿವಾಟಿನ ಸ್ಥಿತಿಯನ್ನು 3 ಬಾರಿ ಮಾತ್ರ ನೋಡಬಹುದು. ಯಾಕಂದ್ರೆ, ಪ್ರತಿ ಪರಿಶೀಲನೆ ನಡುವೆ ಕನಿಷ್ಠ 90 ಸೆಕೆಂಡುಗಳ ಅಂತರ ಇರಬೇಕಾಗುತ್ತದೆ.
























