ವಕೀಲರ ಜೊತೆಗೆ ಮುಸುಕು ಧರಿಸಿಕೊಂಡು ಬಂದ ದೂರುದಾರ
ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಮೃತದೇಹಗಳನ್ನು ಹೂತು ಹಾಕಿದ್ದೇನೆ ಎಂದು ಆರೋಪಿಸಿದ ವ್ಯಕ್ತಿಯನ್ನು ಶನಿವಾರ ಎಸ್‌ಐಟಿ ಅಧಿಕಾರಿಗಳು ಎಂಟು ತಾಸಿಗೂ ಅಧಿಕ ಹೊತ್ತು ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಧರ್ಮಸ್ಥಳ ಪ್ರಕರಣದ ತನಿಖೆಗೆ ರಚಿಸಲಾದ ಎಸ್‌ಐಟಿ ಅಧಿಕಾರಿಗಳು ಮಂಗಳೂರಿನ ಕದ್ರಿ ಮಲ್ಲಿಕಟ್ಟೆಯ ಸರ್ಕಾರಿ ಅತಿಥಿಗೃಹದಲ್ಲಿ ಎಸ್‌ಐಟಿ ತಂಡದ ಡಿಐಜಿ ಎಂ.ಎನ್. ಅನುಚೇತ್ ಮತ್ತು ಆಂತರಿಕ ಭದ್ರತಾ ವಿಭಾಗದ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಅವರು ದೂರುದಾರನನ್ನು ವಿಚಾರಣೆಗೊಳಪಡಿಸಿದರು.
ಬೆಳಗ್ಗೆ 10.50ಕ್ಕೆ ವಿಚಾರಣೆ ಆರಂಭಿಸಿದ ತಂಡ ರಾತ್ರಿ 7.20ರವರೆಗೆ ವಿಚಾರಣೆ ನಡೆಸಿದೆ. ಇಲ್ಲಿಗೂ ದೂರುದಾರ ಮುಸುಕು ಧರಿಸಿಕೊಂಡು ಬಂದಿದ್ದು, ಜೊತೆಗೆ ಮಹಿಳಾ ನ್ಯಾಯವಾದಿ ಸಹಿತ ಇಬ್ಬರು ವಕೀಲರು ಇದ್ದರು. ಸುಮಾರು 8.30 ಗಂಟೆಗಳ ಕಾಲ ವಿಚಾರಣೆ ನಡೆದಿದೆ. ಬಳಿಕ ದೂರುದಾರನು ವಕೀಲರ ಜೊತೆ ಕಾರಿನಲ್ಲಿ ನಿರ್ಗಮಿಸಿದ್ದಾರೆ.
ವಿಚಾರಣೆಯ ಬಗ್ಗೆ ಸುದ್ದಿಗಾರರು ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆಯಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಸುದ್ದಿಗಾರರ ಕಣ್ಣು ತಪ್ಪಿಸಿ ಅಧಿಕಾರಿಗಳು ಮತ್ತೊಂದು ದಾರಿಯ ಮೂಲಕ ಸರಕಾರಿ ಅತಿಥಿಗೃಹದಿಂದ ಹೊರಹೋದರು. ಮೂಲಗಳ ಪ್ರಕಾರ ಶನಿವಾರ ಎಸ್‌ಐಟಿ ತಂಡವು ಅನೇಕ ವಿಷಯಗಳ ಬಗ್ಗೆ ಮಾಹಿತಿ ಕಲೆ ಹಾಕಿದೆ. ವಿಚಾರಣೆಯ ಸಂದರ್ಭ ಎಸ್‌ಐಟಿ ತಂಡ ದೂರುದಾರನಿಂದ ಪಡೆದುಕೊಂಡ ಮಾಹಿತಿಯ ಮಧ್ಯಂತರ ವರದಿಯನ್ನು ಎಸ್‌ಐಟಿ ನ್ಯಾಯಾಲಯಕ್ಕೆ ಸಲ್ಲಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
























