ಇಳಿಜಾರಿನಲ್ಲಿ ಬ್ರೇಕ್ಫೇಲ್ ಆದ ಟ್ರಕ್ 25ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿಯಾಗಿ ಅಪಘಾತ
ಮುಂಬೈ: ಮುಂಬೈ-ಪುಣೆ ಎಕ್ಸ್ಪ್ರೆಸ್ವೇಯಲ್ಲಿ ರಾಯಗಢ ಜಿಲ್ಲೆಯ ಖೋಪೋಲಿ ಬಳಿ ಸುಮಾರು 20 ವಾಹನಗಳು ಸರಣಿ ಅಪಘಾತಕ್ಕೀಡಾಗಿ ಓರ್ವ ಮೃತಪಟ್ಟು ಹಲವು ಮಂದಿ ಗಾಯಗೊಂಡಿದ್ದಾರೆ. ಏಕಮುಖ ಸಂಚಾರ ರಸ್ತೆಯಲ್ಲಿ 25ಕ್ಕೂ ಹೆಚ್ಚು ವಾಹನಗಳು ಪರಸ್ಪರ ಡಿಕ್ಕಿಯಾಗಿವೆ.
ಖೋಪೋಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮುಂಬೈಗೆ ಹೋಗುವ ಮಾರ್ಗದಲ್ಲಿ ಘಟನೆ ಸಂಭವಿಸಿದೆ. ಇಳಿಜಾರಿನಲ್ಲಿ ಕಂಟೇನರ್ ಟ್ರಕ್ನ ಬ್ರೇಕ್ ಫೇಲ್ ಆಗಿ ಇದರಿಂದ ನಿಯಂತ್ರಣ ಕಳೆದುಕೊಂಡು ಮುಂದೆ ಸಾಗುತ್ತಿದ್ದ ಬಿಎಂಡಬ್ಲ್ಯು ಮತ್ತು ಮರ್ಸಿಡಿಸ್ನಂತಹ ಐಷಾರಾಮಿ ಕಾರುಗಳು ಸೇರಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದೆ.
ಮುಂಬೈ ಲೇನ್ನ ಹೊಸ ಸುರಂಗ ಮಾರ್ಗದಿಂದ ಫುಡ್ ಮಾಲ್ ಹೋಟೆಲ್ ಪ್ರದೇಶದವರೆಗೆ ಅಪಘಾತ ಸಂಭವಿಸಿದೆ. ಓರ್ವ ಸಾವನ್ನಪ್ಪಿದ್ದು, ಸುಮಾರು 20 ಮಂದಿ ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ಕೆಲ ವಾಹನಗಳಂತೂ ಸಂಪೂರ್ಣ ಜಖಂಗೊಂಡಿವೆ.
ಸ್ಥಳೀಯ ಪೊಲೀಸರು ಹಾಗೂ ಅಂಬುಲೆನ್ಸ್ ವ್ಯವಸ್ಥೆಯನ್ನು ನಿಯೋಜನೆ ಮಾಡಿದ್ದಾರೆ. ಗಾಯಗೊಂಡವರನ್ನ ನವಿಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸುತ್ತಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆ ಬಳಿಕ ಅಪಘಾತಕ್ಕೆ ಕಾರಣವಾದ ಟ್ರಕ್ ಚಾಲಕನನ್ನ ವಶಕ್ಕೆ ಪಡೆಯಲಾಗಿದೆ.
























