ಶೃಂಗೇರಿ ದೇವಸ್ಥಾನಕ್ಕೆ ನೆರೆ ಭೀತಿ
ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ತುಂಗಾ, ಭದ್ರಾ ನದಿಗಳು ಭೋರ್ಗರೆಯುತ್ತಿದ್ದು ಶೃಂಗೇರಿಯಲ್ಲಿ ನೆರೆ ಆತಂಕ ಸೃಷ್ಟಿಯಾಗಿದೆ. ಕೆರೆಕಟ್ಟೆ ಸಮೀಪದ ಶೃಂಗೇರಿ-ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169ರ ಮೇಲೆ ಗುಡ್ಡ ಕುಸಿದಿದೆ. ರಸ್ತೆಗೆ ಮಣ್ಣು ಬಿದ್ದ ಹಿನ್ನೆಲೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.
ಶೃಂಗೇರಿ ಶಾರದಾ ಮಠಕ್ಕೆ ಸಂಪರ್ಕಿಸುವ ಪರ್ಯಾಯ ಮಾರ್ಗ ಜಲಾವೃತವಾಗಿದ್ದು, ಮಠದ ಪಾರ್ಕಿಂಗ್ ಪ್ರದೇಶವಾದ ಗಾಂಧಿ ಮೈದಾನದಲ್ಲಿ ತುಂಗಾ ನದಿ ನೀರು ನುಗ್ಗುವ ಆತಂಕ ಸೃಷ್ಟಿಯಾಗಿದೆ. ಶೃಂಗೇರಿ ದೇವಾಲಯ ಸಮೀಪದ ತುಂಗಾ ನದಿಯ ತೀರದಲ್ಲಿರುವ ಕಪ್ಪೆ ಶಂಕರ ದೇವಾಲಯ ಸಂಪೂರ್ಣ ಮುಳುಗಡೆಯಾಗಿದೆ. ಮಳೆ ಹೀಗೆ ಮುಂದುವರೆದರೆ ಶೃಂಗೇರಿ ಶಾರದಾ ಮಠದ ಸುತ್ತಮುತ್ತಲಿನ ಇನ್ನಷ್ಟು ಪ್ರದೇಶ ಜಲಾವೃತವಾಗುವ ಆತಂಕ ಸೃಷ್ಟಿಯಾಗಿದೆ.
ಕಳಸ ಭಾಗದಲ್ಲೂ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಭದ್ರಾ ನದಿ ಕೂಡ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು,ಒಳಹರಿವು ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು, ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಮಳೆ ಮುಂದುವರೆದಿದ್ದು. ತುಂಗಾ, ಭದ್ರಾ ನದಿಗಳ ಒಳ ಹರಿವಿನಲ್ಲಿ ಭಾರಿ ಏರಿಕೆಯಾಗುತ್ತಿದೆ. ಮಲೆನಾಡಲ್ಲಿ ಮಳೆಯಾದರೆ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ನೆರೆ ಆತಂಕ ಸೃಷ್ಟಿಯಾಗಿದೆ.
ಗಾಳಿ ಸಹಿತ ಧಾರಾಕಾರ ಮಳೆಯಿಂದಾಗಿ ಚಂದ್ರದ್ರೋಣ ಪರ್ವತ ರಸ್ತೆಯ ಮೂರು ಕಡೆಗಳಲ್ಲಿ ಬೃಹತ್ ಗಾತ್ರದ ಮರಗಳು ಧರೆಗುರುಳಿವೆ. ಹೀಗಾಗಿ ಮುಳ್ಳಯ್ಯನಗಿರಿ, ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಮತ್ತು ಝರಿ ಫಾಲ್ಸ್ ಸಂಪರ್ಕಿಸುವ ರಸ್ತೆ ಸಂಪೂರ್ಣ ಬಂದ್ ಆಗಿದೆ. ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಗಾಳಿ ಸಹಿತ ಧಾರಾಕಾರ ಮಳೆಯಿಂದಾಗಿ ಚಂದ್ರಿಕಾ ಎಸ್ಟೇಟ್, ತಿಪ್ಪೇನಹಳ್ಳಿ ಎಸ್ಟೇಟ್ ಮತ್ತು ಇಂದಿರಾನಗರ ಬಳಿ ಬೃಹತ್ ಗಾತ್ರದ ಮರ ಧರೆಗುರುಳಿದಿದೆ. ಸಂಚಾರ ಅಸ್ತವ್ಯಸ್ತವಾಗಿದೆ. ಮರ ಧರೆಗುರಳಿದ್ದರಿಂದ ವಿದ್ಯುತ್ ಕಂಬಕ್ಕೂ ಹಾನಿ ಉಂಟಾಗಿದೆ.
ಚಿಕ್ಕಮಗಳೂರು-ಶೃಂಗೇರಿ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಕೂಡ ಗಾಳಿ ಸಹಿತ ಭಾರಿ ಮಳೆಗೆ ಮರಗಳು ಮುರಿದುಬಿದ್ದಿದೆ. ಚಿಕ್ಕಮಗಳೂರು ತಾಲೂಕಿನ ಬಸರವಳ್ಳಿ ಬಳಿ ಮರಗಳು ಧರೆಗುರುಳಿದೆ. ಕೊಪ್ಪ, ಮೂಡಿಗೆರೆ, ಶೃಂಗೇರಿ, ಕಳಸ ಮತ್ತು ಎನ್ ಆರ್ ಪುರ ತಾಲೂಕಿನಲ್ಲಿ ಭಾರಿ ಮಳೆ ಸುರಿಯುತ್ತಿದೆ.
























