ಮಂಗಳೂರಿನಲ್ಲಿ ಪೊಲೀಸ್ ವಿಚಾರಣೆಗೆ ಹಾಜರಾದ ಶವ ಹೂತಿಟ್ಟಿದ್ದೇನೆ ಎಂದ ವ್ಯಕ್ತಿ
ಮಂಗಳೂರು : ಧರ್ಮಸ್ಥಳದಲ್ಲಿ ಶವ ಹೂತಿದ್ದೇನೆ ಎಂದು ದೂರು ನೀಡಿದ್ದ ವ್ಯಕ್ತಿ ಇಂದು ಮಂಗಳೂರಿನಲ್ಲಿ ಈ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಎದುರು ಹಾಜರಾಗಿದ್ದಾರೆ ಎಂದು ತಿಳಿದುಬಂದಿದೆ.
ಧರ್ಮಸ್ಥಳ ಶವ ಹೂತಿಟ್ಟ ಆರೋಪದ ಬಗ್ಗೆ ತನಿಖೆ ನಡೆಸಲು ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ ಶುಕ್ರವಾರದಿಂದ ತನಿಖೆ ಪ್ರಾರಂಭಿಸಿದೆ. ನಿನ್ನೆ ದೂರಿನ ಕಡತಗಳ ಪರಿಶೀಲನೆ ನಡೆದಿದ್ದು, ಇಂದು ದೂರುದಾರನ ವಿಚಾರಣೆ ನಡೆಯುತ್ತಿದೆ ಎಂದು ವರದಿಯಾಗಿದೆ.
ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಐಬಿಯಲ್ಲಿ ಎರಡು ಕೊಠಡಿಗಳನ್ನು ಎಸ್ಐಟಿ ತಂಡಕ್ಕೆ ನೀಡಲಾಗಿದೆ. ಇಲ್ಲಿಗೆ ದೂರುದಾರ ವ್ಯಕ್ತಿ ತನ್ನ ವಕೀಲರ ಜೊತೆಗೆ ಬಂದಿದ್ದಾನೆ ಎನ್ನಲಾಗಿದೆ.
ವಿಶೇಷ ತನಿಖಾ ತಂಡದ ಐಪಿಎಸ್ ಅಧಿಕಾರಿ ಜಿತೇಂದ್ರ ದಯಾಮ ಶುಕ್ರವಾರ ಸಂಜೆ ತನಕ ಮಂಗಳೂರಿನಲ್ಲಿ ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ್ದು, ಬಳಿಕ ರಾತ್ರಿ ಹೊತ್ತು ದಿಢೀರ್ ಎಂದು ಧರ್ಮಸ್ಥಳಕ್ಕೆ ಹೋಗಿದ್ದಾರೆ. ಧರ್ಮಸ್ಥಳ ಠಾಣೆಯಲ್ಲಿ ಇನ್ಸ್ಪೆಕ್ಟರ್ ಸಮರ್ಥ್ ಅವರಿಂದ ಪ್ರಕರಣದ ಕಡತ ಪಡೆದುಕೊಂಡಿದ್ದಾರೆ ಹಾಗೂ ಇನ್ನಷ್ಟು ಮಾಹಿತಿ ಕಲೆಹಾಕಿ ಮಂಗಳೂರಿಗೆ ವಾಪಸಾಗಿದ್ದಾರೆ.
























