ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ವೀರ ಯೋಧರ ಶೌರ್ಯ ಎಲ್ಲರಿಗೂ ಸ್ಪೂರ್ತಿ
ನವದೆಹಲಿ: ಕಾರ್ಗಿಲ್ ವಿಜಯ್ ದಿವಸ್ ಹಿನ್ನೆಲೆಯಲ್ಲಿ ಈ ಯುದ್ಧದಲ್ಲಿ ಹೋರಾಡಿದ ಧೀರ ಯೋಧರಿಗೆ, ಹುತಾತ್ಮರಾದ ಯೋಧರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ ಅವರು ಗೌರವ ನಮನಗಳನ್ನು ಸಲ್ಲಿಸಿದ್ದಾರೆ.
ರಾಷ್ಟ್ರಪತಿ ಮುರ್ಮು ಅವರು ಯೋಧರ ತ್ಯಾಗವನ್ನು ಸ್ಮರಿಸಿ ಟ್ವೀಟ್ ಮಾಡಿದ್ದು, ಕಾರ್ಗಿಲ್ ವಿಜಯ ದಿವಸ್ ಸಂದರ್ಭದಲ್ಲಿ ಮಾತೃಭೂಮಿಗಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ವೀರ ಯೋಧರಿಗೆ ಹೃತ್ಪೂರ್ವಕ ಗೌರವಗಳನ್ನು ಅರ್ಪಿಸುತ್ತೇನೆ. ಈ ದಿನವು ನಮ್ಮ ಯೋಧರ ಅಸಾಧಾರಣ ಧೈರ್ಯ, ಶೌರ್ಯ ಮತ್ತು ದೃಢಸಂಕಲ್ಪದ ಪ್ರತಿಬಿಂಬವಾಗಿದೆ. ದೇಶಕ್ಕಾಗಿ ಅವರ ಸಮರ್ಪಣೆ, ಸರ್ವೋಚ್ಚ ತ್ಯಾಗವು ದೇಶದ ಜನರಿಗೆ ಸ್ಪೂರ್ತಿ ನೀಡುತ್ತದೆ ಎಂದಿದ್ದಾರೆ.
ಪ್ರಧಾನಿ ಮೋದಿ ಅವರು ಸಹ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ವೀರರಿಗೆ ಗೌರವ ಸಲ್ಲಿಸಿದ್ದು, ಕಾರ್ಗಿಲ್ ವಿಜಯ ದಿನದಂದು ದೇಶವಾಸಿಗಳಿಗೆ ಹೃತ್ಪೂರ್ವಕ ಶುಭಾಶಯಗಳು. ದೇಶದ ಹಿರಿಮೆಯನ್ನು ರಕ್ಷಣೆ ಮಾಡಲು ತಮ್ಮ ಪ್ರಾಣವನ್ನೇ ಮುಡಿಪಿಟ್ಟ ಭಾರತಾಂಭೆಯ ಧೈರ್ಯಶಾಲಿ ಪುತ್ರರ ಅಪ್ರತಿಮ ಧೈರ್ಯ, ಶೌರ್ಯಗಳನ್ನು ಈ ಸಮಯ ನಮಗೆ ನೆನಪಿಸುತ್ತದೆ. ತಾಯಿನಾಡಿಗಾಗಿ ಎಲ್ಲವನ್ನೂ ತ್ಯಾಗ ಮಾಡುವ ಅವರ ಉತ್ಸಾಹ ಎಲ್ಲಾ ಪೀಳಿಗೆಗೂ ಸ್ಪೂರ್ತಿ ನೀಡುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
























