ಮಡಿಕೇರಿ: ಸಂಪಾಜೆ ಸಮೀಪದ ಕೊಯನಾಡಿನಲ್ಲಿ ಲಾರಿ ಮತ್ತು ಕಾರೊಂದರ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಯುವಕರು ಸಾವನ್ನಪ್ಪಿದ್ದಾರೆ.
ಮೃತರನ್ನು ಗೋಣಿಕೊಪ್ಪದ ನಿಹಾದ್, ರಿಝಾನ್, ಹುಣಸೂರಿನ ರಾಖಿಬ್ ಎಂದು ಗುರುತಿಸಲಾಗಿದ್ದು, ಮತ್ತೊಬ್ಬ ಯುವಕನ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ. ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಇನ್ನಿಬ್ಬರನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.
ಮಂಗಳೂರಿನ ಹೊರವಲಯದಲ್ಲಿರುವ ಉಳ್ಳಾಲಕ್ಕೆ ತೆರಳಿ ಅಲ್ಲಿಂದ ತಮ್ಮೂರುಗಳಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಮಡಿಕೇರಿಯಿಂದ ಸುಳ್ಯದ ಕಡೆಗೆ ಬರುತ್ತಿದ್ದ ಲಾರಿ ಯುವಕರಿದ್ದ ಕಾರಿಗೆ ಢಿಕ್ಕಿ ಹೊಡೆದಿರುವುದಾಗಿದೆ. ಢಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
























