ಬೆಳಗ್ಗೆ ಪ್ರಾರ್ಥನೆ ನಡೆಯುತ್ತಿರುವಾಗಲೇ ಕುಸಿದು ಬಿದ್ದ ಛಾವಣಿ
ಜೈಪುರ: ಪ್ರಾಥಮಿಕ ಶಾಲಾ ಕಟ್ಟದ ಮೇಲ್ಛಾವಣಿ ಕುಸಿದು ಕನಿಷ್ಠ ನಾಲ್ವರು ಮಕ್ಕಳು ಸಾವನ್ನಪ್ಪಿರುವ ದಾರುಣ ಘಟನೆ ರಾಜಸ್ಥಾನದ ಝಲಾವರ್‌ನಲ್ಲಿ ಸಂಭವಿಸಿದೆ.
ಇಂದು ಬೆಳಗ್ಗೆ ಝಲಾವರ್‌ನಲ್ಲಿರುವ ಪಿಪ್ಲೋಡಿ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಕುಸಿದಿದ್ದು, ಘಟನೆಯಲ್ಲಿ ಕನಿಷ್ಠ ನಾಲ್ವರು ಮಕ್ಕಳು ಸಾವನ್ನಪ್ಪಿರುವುದಾಗಿ ವರದಿಯಾಗಿದೆ. 60ಕ್ಕೂ ಹೆಚ್ಚು ಮಕ್ಕಳು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದು, ರಕ್ಷಣಾ ತಂಡಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸ್ಥಳೀಯರು ಸಹ ಅಧಿಕಾರಿಗಳೊಂದಿಗೆ ಕೈಜೋಡಿಸಿದ್ದಾರೆ.
ಮೃತಪಟ್ಟ ಮಕ್ಕಳ ಶವಗಳನ್ನ ಹೊರತೆಗೆಯಲಾಗಿದೆ. ಗಾಯಗೊಂಡವರನ್ನ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವಶೇಷಗಳ ಅಡಿ ಸಿಲುಕಿರುವ ಮಕ್ಕಳ ರಕ್ಷಣಾ ಕಾರ್ಯ ನಡೆಯುತ್ತಿದೆ. ಕ್ರೇನ್‌ಗಳ ಮೂಲಕ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಲಾಗುತ್ತಿದೆ.
ಬೆಳಗ್ಗೆ 8.30ಕ್ಕೆ ಶಾಲೆ ಶುರುವಾದ ವೇಳೆ ದುರಂತ ಸಂಭವಿಸಿದೆ. ಈ ಮೊದಲೇ ಶಿಥಿಲಾವಸ್ಥೆಯಲ್ಲಿದ್ದ ಭಾರಿ ಮಳೆಯ ಕಾರಣ ಮೇಲ್ಛಾವಣಿ ಕುಸಿದಿದೆ ಎಂದು ಹೇಳಲಾಗುತ್ತಿದೆ. ದುರಂತದಲ್ಲಿ ಮೃತಪಟ್ಟ ಮಕ್ಕಳಿಗೆ ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಸಂತಾಪ ಸೂಚಿಸಿ ಈ ಘಟನೆ ನಿಜಕ್ಕೂ ಹೃದಯವಿದ್ರಾವಕವಾದದ್ದು ಅಂತ ಕಂಬನಿ ಮಿಡಿದಿದ್ದಾರೆ.
























