ಉಜಿರೆಗೆ ಹನಿಮೂನ್‌ಗೆಂದು ಬಂದು ಹೋಟೆಲ್‌ನಲ್ಲಿ ಪತ್ನಿಯನ್ನು ಸಾಯಿಸಲು ಯತ್ನಿಸಿದ್ದ ಪತಿ
ಬೆಳ್ತಂಗಡಿ : ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾದ ದಂಪತಿ ಹನಿಮೂನ್‌ಗೆ ಬಂದು ಉಜಿರೆಯ ಹೊಟೇಲ್‌ನಲ್ಲಿ ಉಳಿದುಕೊಂಡ ವೇಳೆ ರಾತ್ರಿ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ ಕೊಲೆಗೆ ಯತ್ನಿಸಿದ ಪ್ರಕರಣದ ಪತಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ರಾಮನಗರ ಜಿಲ್ಲೆಯ ಬಿಡದಿ ತಾಲೂಕಿನ ನಂದಗೋಕುಲ ನಿವಾಸಿ ವಿಶ್ವನಾಥ (24) ಮತ್ತು 22 ವರ್ಷದ ಯುವತಿ 2025ರ ಮೇ 22ರಂದು ಮದುವೆಯಾಗಿದ್ದು, ಜುಲೈ 22ರಂದು ರಾತ್ರಿ ಉಜಿರೆಯ ಹೊಟೇಲಿಗೆ ಬಂದು ರೂಂ ಪಡೆದು ತಂಗಿದ್ದರು. ಹೊಟೇಲ್ ರೂಂನಲ್ಲಿ ಜುಲೈ 22ರಂದು ರಾತ್ರಿ ಕುಡಿದ ಮತ್ತಿನಲ್ಲಿ ಪತ್ನಿಗೆ ವರದಕ್ಷಿಣೆಗಾಗಿ ಕಿರುಕುಳ ನೀಡಿ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದಾನೆ ಎಂದು ಆರೋಪಿಸಿ ಪತ್ನಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಜುಲೈ 23ರಂದು ಸಂಜೆ ಪತಿ ವಿಶ್ವನಾಥನ ವಿರುದ್ಧ ದೂರು ನೀಡಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪತಿ ವಿಶ್ವನಾಥ ವಿರುದ್ಧ BNS 109,115(1), 85 ,4DP (ಕೊಲೆಯತ್ನ, ಹಲ್ಲೆ, ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಬೇಡಿಕೆ ಕಿರುಕುಳ) ಅಡಿಯಲ್ಲಿ ಪ್ರಕರಣ ಪ್ರಕರಣ ದಾಖಲಾಗಿತ್ತು. ಆರೋಪಿ ಪತಿ ವಿಶ್ವನಾಥನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
























