ತಿರುಪತಿ: ಭಕ್ತರ ಕಾಯುವಿಕೆಯ ಅವಧಿಯನ್ನು ಕಡಿಮೆ ಮಾಡುವ ಸಲುವಾಗಿ ಮತ್ತು ಶೀಘ್ರ ದರ್ಶನ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಟಿಟಿಡಿಯು ‘ಶ್ರೀ ವಾಣಿ’ ಹೆಸರಿನಲ್ಲಿ ಟಿಕೆಟ್ ವ್ಯವಸ್ಥೆ ಆರಂಭಿಸಿದೆ.
ಶ್ರೀ ವಾಣಿ ನೂತನ ಟಿಕೆಟ್ ವಿತರಣಾ ಕೌಂಟರ್ ಅನ್ನು ದೇವಾಲಯದಲ್ಲಿ ತೆರೆಯಲಾಗಿದೆ. ಈ ಟಿಕೆಟ್ ಕೌಂಟರ್ ಅನ್ನು ಸುಮಾರು 60 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು ಎಲ್ಲಾ ರೀತಿಯ ಅತ್ಯಾಧುನಿಕ ಮೂಲಸೌಕರ್ಯಗಳನ್ನು ಇದು ಒಳಗೊಂಡಿದೆ. ಭಕ್ತರಿಗೆ ಸುಲಭವಾಗಿ ದರ್ಶನದ ಟಿಕೆಟ್ ವಿತರಿಸಲು ಈ ವ್ಯವಸ್ಥೆ ಕಲ್ಪಿಸಲಾಗಿದೆ.
ಈ ನೂತನ ಉಪಕ್ರಮದಲ್ಲಿ ಶೀಘ್ರ ದರ್ಶನಕ್ಕೆ ಪ್ರತಿಯಾಗಿ ಭಕ್ತರು ದೇಣಿಗೆಯನ್ನು ದೇವಾಲಯದ ಯೋಜನೆಗಳಿಗಾಗಿ ನೀಡಬಹುದಾಗಿದೆ. ಟಿಕೆಟ್‌ಗಾಗಿ ಕಾತರಿಸುವ ಭಕ್ತರ ಸಂಖ್ಯೆ ಹೆಚ್ಚುತ್ತಿರುವ ಕಾರಣ ವಿತರಣೆಯಲ್ಲಿ ವಿಳಂಬವಾಗುತ್ತಿದೆ. ಈ ನೂತನ ಕೇಂದ್ರದ ಸ್ಥಾಪನೆಯಿಂದ ಭಕ್ತರ ಕಾಯುವಿಕೆ ಕಡಿಮೆಯಾಗಿ ಶೀಘ್ರ ದರ್ಶನ ಸಾಧ್ಯವಾಗಲಿದೆ ಎಂದು ಮೂಲಗಳು ಹೇಳಿವೆ.
























