ಬೆಂಗಳೂರು: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ಆರೋಪಿ ದರ್ಶನ್ ತೂಗುದೀಪ್‌ಗೆ ಹೈಕೋರ್ಟ್ ಜಾಮೀನು ನೀಡಿತ್ತು. ಆದರೆ ಈ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಪೊಲೀಸರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಈ ವಿಚಾರಣೆ ಇಂದು ನಡೆಯಬೇಕಿತ್ತು. ಆದರೆ ದರ್ಶನ್ ಪರ ವಕೀಲರ ಗೈರುಹಾಜರಿಯಿಂದ ಪ್ರಕರಣದ ವಿಚಾರಣೆಯನ್ನು ಜುಲೈ 24 ಕ್ಕೆ ಮುಂದೂಡಲಾಗಿದೆ.
ದರ್ಶನ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಬೇಕಾಗಿತ್ತು. ಆದರೆ ಅವರು ಈ ಪ್ರಕರಣದ ವಿಚಾರಣೆಗೆ ಗೈರಾಗಿದ್ದಾರೆ. ದರ್ಶನ್ ಪರ ಮತ್ತೊಬ್ಬ ವಕೀಲ ಸಿದ್ಧಾರ್ಥ್ ಧವೆ ಅವರು ವಾದ ಮಂಡಿಸಿದ್ದು, ಬಂಧನದ ಕಾರಣಗಳ ಬಗ್ಗೆ ನಾವು ಮಾತನಾಡುತ್ತಿಲ್ಲ. ಪ್ರಕರಣದ ಮೆರಿಟ್‌ಗಳನ್ನು ನ್ಯಾಯಾಲಯದ ಮುಂದಿಡುತ್ತೇವೆ ಎಂದಿದ್ದಾರೆ. ಆದರೆ ಸಿಬಲ್ ಗೈರು ಹಿನ್ನೆಲೆಯಲ್ಲಿ ವಿಚಾರಣೆಗೆ ಸಮಯವನ್ನು ಕೋರಿ ಮನವಿ ಮಾಡಲಾಗಿದೆ.
ಈ ಪ್ರಕರಣದ ವಿಚಾರಣೆ ಜುಲೈ 24 ರಂದು ನಡೆಯಲಿದ್ದು, ಆ ಸಂದರ್ಭದಲ್ಲಿ ಜಾಮೀನು ರದ್ದುಗೊಳಿಸಬೇಕೋ, ಬೇಡವೋ ಎನ್ನುವ ತೀರ್ಮಾನವಾಗುವ ಸಾಧ್ಯತೆ ಇದೆ. ಒಂದು ವೇಳೆ ಜಾಮೀನು ರದ್ದಾದಲ್ಲಿ ದರ್ಶನ್, ಪವಿತ್ರಾ ಸೇರಿ ಎಲ್ಲಾ ಆರೋಪಿಗಳು ಮತ್ತೆ ಕಂಬಿ ಎಣಿಸಬೇಕಾಗುತ್ತದೆ.
























