ಹೈಕೋರ್ಟ್ ನ್ಯಾಯಾಧೀಶ ಯಶವಂತ್ ವರ್ಮಾ ಮನೆಯಲ್ಲಿ ಕೋಟಿಗಟ್ಟಲೆ ಹಣ ಪತ್ತೆಯಾದ ಪ್ರಕರಣದ ಜೊತೆಗೆ ತಳಕು ಹಾಕಿಕೊಂಡಿದೆ ಧನ್ಕರ್ ದಿಢೀರ್ ನಿರ್ಧಾರ
ನಿನ್ನೆ ರಾತ್ರಿ ರಾಜಧಾನಿಯ ರಾಜಕೀಯ ಪಡಸಾಲೆಯಲ್ಲಿ ನಡೆದ್ದಾದರೂ ಏನು…?
ನವದೆಹಲಿ: ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರ ಹಠಾತ್ ರಾಜೀನಾಮೆ ನಿರ್ಧಾರ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಆಡಳಿತ ಮತ್ತು ವಿಪಕ್ಷ ಎರಡೂ ಕಡೆಯವರಿಗೂ ಉಪರಾಷ್ಟ್ರಪತಿಯವರ ಈ ದಿಢೀರ್ ನಿರ್ಧಾರ ಅಚ್ಚರಿಗೆ ಮತ್ತು ಆಘಾತ ನೀಡಿದೆ. ಧನ್ಕರ್ ರಾಜೀನಾಮೆಗೆ ಅನಾರೋಗ್ಯದ ಕಾರಣ ನೀಡಿದ್ದರೂ ಒಳಗಿನ ಗುಟ್ಟು ಬೇರೆಯೇ ಇದೆ.
ಈಗ ಧನ್ಕರ್ ಇಂಥ ದೊಡ್ಡ ನಿರ್ಧಾರವೊಂದನ್ನು ಹಠಾತ್ ತೆಗೆದುಕೊಳ್ಳಲು ಕಾರಣ ಎನ್ನುವುದರ ಕುರಿತು ನಾನಾ ರೀತಿಯಲ್ಲಿ ಚರ್ಚೆಗಳು ನಡೆಯುತ್ತಿವೆ. ಜಗದೀಪ್ ಧನ್ಕರ್ ನಿರ್ಧಾರದ ಹಿಂದೆ ಕೆಲ ತಿಂಗಳ ಹಿಂದೆ ಮನೆಯಲ್ಲಿ ಕೋಟಿಗಟ್ಟಲೆ ನಗದು ಹಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಹೈಕೋರ್ಟ್ ನ್ಯಾಯಾಧೀಶ ಯಶವಂತ್ ವರ್ಮ ಅವರ ಪ್ರಕರಣ ಇದೆ ಎನ್ನಲಾಗಿದೆ.
ನ್ಯಾ.ಯಶವಂತ್ ವರ್ಮ ಅವರಿಗೆ ವಾಗ್ದಂಡನೆ ಹಾಕಿ ನ್ಯಾಯಾಂಗದೊಳಗಿನ ಭ್ರಷ್ಟಾಚಾರವನ್ನು ಅನಾವರಣಗೊಳಿಸಲು ಸರ್ಕಾರ ತಯಾರಾಗಿತ್ತು. ಮುಂಗಾರು ಅಧಿವೇಶನದಲ್ಲೇ ವಾಗ್ದಂಡನೆಯ ನಿಲುವಳಿ ಮಂಡಿಸುವುದೆಂದು ತೀರ್ಮಾನವಾಗಿತ್ತು. ಆದರೆ ನ್ಯಾಯಾಧೀಶರಿಗೆ ವಾಗ್ದಂಡನೆ ವಿಧಿಸುವುದಕ್ಕೆ ಕಾಂಗ್ರೆಸ್ ನೇತೃತ್ವದ ವಿಪಕ್ಷ ಮೈತ್ರಿಕೂಟದ ವಿರೋಧವಿತ್ತು.
ನಿನ್ನೆಯ ಕಲಾಪದಲ್ಲಿ ವಿಪಕ್ಷ ನ್ಯಾ.ಯಶವಂತ್ ಶರ್ಮ ಅವರನ್ನು ನ್ಯಾಯಾಂಗ ಹುದ್ದೆಯಿಂದಲೇ ವಜಾಗೊಳಿಸಲು ನಿಲುವಳಿ ಮಂಡಿಸಿದೆ. ಮೇಲ್ಮನೆಯಲ್ಲಿ ಸಂಸದರು ನಿಲುವಳಿ ಮಂಡಿಸಿದ್ದು, ರಾಜ್ಯಸಭೆಯ ಸಭಾಪತಿಯಾಗಿ ಧನ್ಕರ್ ಅದನ್ನು ಸ್ವೀಕರಿಸಿ ಸದನದ ಕಾರ್ಯದರ್ಶಿಗೆ ಸೂಕ್ತ ಪ್ರಕ್ರಿಯೆಗಳನ್ನು ಕೈಗೊಳ್ಳಲು ಸೂಚನೆ ನೀಡಿದ್ದರು.
ಆದರೆ ಧನ್ಕರ್ ಅವರ ಈ ನಡೆ ಕೇಂದ್ರ ಸರ್ಕಾರಕ್ಕೆ ಪಥ್ಯವಾಗಿಲ್ಲ. ವಿಪಕ್ಷದ ನಿಲುವಳಿಯನ್ನು ಸಭಾಪತಿ ಅಂಗೀಕರಿಸಿರುವುದರಿಂದ ಸರ್ಕಾರ ನ್ಯಾಯಾಧೀಶರಿಗೆ ವಾಗ್ದಂಡನೆ ಹಾಕಿ ಆ ಮೂಲಕ ನ್ಯಾಯಾಂಗಕ್ಕೊಂದು ಎಚ್ಚರಿಕೆ ರವಾನಿಸುವ ಅವಕಾಶವನ್ನು ಕಳೆದುಕೊಂಡಿತ್ತು.
ಆ ಒಂದು ಫೋನ್ ಕರೆ….
ಈ ಬೆಳವಣಿಗೆಯ ನಂತರ ಸರ್ಕಾರದಿಂದ ಧನ್ಕರ್‌ಗೆ ಫೋನ್ ಕರೆಯೊಂದು ಬಂದಿದೆ. ಈ ಕರೆ ಮಾಡಿದ ವ್ಯಕ್ತಿಯ ಜೊತೆ ಧನ್ಕರ್ ತೀಕ್ಷ್ಣ ಧ್ವನಿಯಲ್ಲಿ ಮಾತನಾಡಿದ್ದಾರೆ. ಬಹಳ ಹೊತ್ತು ಮಾತಿನ ಚಕಮಕಿ ನಡೆದಿದೆ. ತನಗಿರುವ ಅಧಿಕಾರವನ್ನೂ ಈ ಮಾತುಕತೆ ವೇಳೆ ಧನ್ಕರ್ ತಿಳಿಸಿದ್ದಾರೆ. ನಂತರ ರಾಜಧಾನಿಯ ರಾಜಕೀಯ ಪಡಸಾಲೆಯಲ್ಲಿ ಬಹಳ ಬಿರುಸಿನ ಚಟುವಟಿಕೆ ನಡೆದಿದೆ.
ಈ ಕರೆ ಬಂದ ಬೆನ್ನಿಗೆ ಸರ್ಕಾರವೇ ಉಪರಾಷ್ಟ್ರಪತಿ ವಿರುದ್ಧ ಅವಿಶ್ವಾಸ ನಿಲುವಳಿ ಮಂಡಿಸುವ ಬಗ್ಗೆ ಗುಸುಗುಸು ಕೇಳಿಬರಲಾರಂಭಿಸಿದೆ. ಒಂದು ವೇಳೆ ಅವಿಶ್ವಾಸ ಮಂಡನೆಯಾದರೆ ತಾನು ಅಧಿಕಾರದಿಂದ ನಿರ್ಗಮಿಸುವುದು ಖಚಿತ ಎನ್ನುವುದು ಧನ್ಕರ್‌ಗೆ ಗೊತ್ತಿರುವ ವಿಚಾರವೇ. ಆರು ತಿಂಗಳ ಹಿಂದೆ ವಿಪಕ್ಷ ಕೂಡ ಧನ್ಕರ್ ವಿರುದ್ಧ ಅವಿಶ್ವಾಸ ನಿಲುವಳಿ ಮಂಡಿಸಿತ್ತು. ಯಾವಾಗ ಸರ್ಕಾರವೇ ತನ್ನ ವಿರುದ್ಧ ಅವಿಶ್ವಾಸ ನಿಲುವಳಿ ಮಂಡಿಸುವ ಸಿದ್ಧತೆಯಲ್ಲಿದೆ ಎಂಬ ಸುಳಿವು ಸಿಕ್ಕಿತೋ ಆಗಲೇ ಧನ್ಕರ್ ರಾಜೀನಾಮೆ ಪತ್ರ ಬರೆದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ರವಾನಿಸಿದರು.
ಸೋಮವಾರ ರಾತ್ರಿ 9.25ಕ್ಕೆ ಉಪರಾಷ್ಟ್ರಪತಿಯವರ ಸೋಷಿಯಲ್ ಮೀಡಿಯಾ ಅಕೌಂಟ್ ಎಕ್ಸ್‌ನಲ್ಲಿ ರಾಜೀನಾಮೆ ಪತ್ರ ಪ್ರಕಟವಾಗುವ ತನಕ ಯಾರಿಗೂ ಅವರು ಹೀಗೊಂದು ದಿಢೀರ್ ನಿರ್ಧಾರ ತೆಗೆದುಕೊಳ್ಳುತ್ತಾರೆಂಬ ಕಲ್ಪನೆಯೂ ಇರಲಿಲ್ಲ.
























