ವಿಟ್ಲ: ಮಿನಿ ಟಿಪ್ಪರ್ ಮತ್ತು ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಕಾರು ಚಾಲಕ ಮೃತಪಟ್ಟು, ಅವರ ಸಹೋದರಿ ಹಾಗೂ ಮಗು ಗಂಭೀರ ಗಾಯಗೊಂಡ ಘಟನೆ ವಿಟ್ಲ ಸಮೀಪ ವೀರಕಂಬ ಗ್ರಾಮದ ಕೆಲಿಂಜ ಜಂಕ್ಷನ್‌ನಲ್ಲಿ ನಡೆದಿದೆ.
ಕಾರು ಚಾಲಕ ಅನೀಶ್ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಕಲ್ಲಡ್ಕದಿಂದ ವಿಟ್ಲ ಕಡೆಗೆ ತೆರಳುತ್ತಿದ್ದ ಆಲ್ಟೋ ಕಾರಿಗೆ, ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದ್ದ ಮಿನಿ ಟಿಪ್ಪರ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಕಾರಿನೊಳಗಿನವರು ತೀವ್ರ ಗಾಯಗೊಂಡು ಸ್ಥಳೀಯರಿಂದ ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಗಂಭೀರ ಗಾಯಗೊಂಡ ಅನೀಶ್ ಅವರು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಮೃತಪಟ್ಟಿದ್ದಾರೆ.
ಅನೀಶ್ ಅವರು ಅನಂತಾಡಿ ಆಶ್ವತ್ತಡಿ ಮೂಲದವರು ಹಾಗೂ ಕೇವಲ ಎರಡು ತಿಂಗಳ ಹಿಂದೆ ವಿವಾಹವಾಗಿದ್ದು, ಕುಟುಂಬದ ಸದಸ್ಯರನ್ನು ವಿಟ್ಲಕ್ಕೆ ಬಿಟ್ಟುಕೊಡಲು ಹೋಗುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
























