ಬಿರುಗಾಳಿ ಎಬ್ಬಿಸಲಿದೆ ಆಪರೇಷನ್ ಸಿಂದೂರ, ಮತದಾರರ ಪಟ್ಟಿ ಪರಿಷ್ಕರಣೆ ವಿಚಾರ
ನವದೆಹಲಿ : ಸಂಸತ್ನ ಮುಂಗಾರು ಅಧಿವೇಶನ ಇಂದಿನಿಂದ ಆರಂಭಗೊಳ್ಳಲಿದ್ದು, ವಿಪಕ್ಷ ಇಂಡಿ ಮೈತ್ರಿಕೂಟ ಪಹಲ್ಗಾಮ್ ದಾಳಿ, ಆಪರೇಷನ್ ಸಿಂದೂರ, ಭಾರತದ ವಿದೇಶಾಂಗ ನೀತಿ, ಬುಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಇತ್ಯಾದಿ ವಿಚಾರಗಳನ್ನು ಬತ್ತಳಿಕೆಯಲ್ಲಿಟ್ಟುಕೊಂಡು ಸರ್ಕಾರದ ಮೇಲೆ ದಾಳಿಗೆ ಸಿದ್ಧವಾಗಿದೆ. ಆಪರೇಷನ್ ಸಿಂದೂರ ವಿಚಾರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡುತ್ತಿರುವ ದಿನಕ್ಕೊಂದು ಹೇಳಿಕೆಗಳ ಕುರಿತು ಸ್ವತಹ ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಮಾತನಾಡಬೇಕೆಂದು ವಿಪಕ್ಷ ಪಟ್ಟು ಹಿಡಿಯಲಿದೆ.
ಇದೇ ವೇಳೆ ಸರ್ಕಾರ ಆಪರೇಷನ್ ಸಿಂದೂರವೂ ಸೇರಿದಂತೆ ವಿಪಕ್ಷ ಎತ್ತುವ ಎಲ್ಲ ವಿಚಾರಗಳ ಕುರಿತು ಚರ್ಚೆಗೆ ತಾನು ತಯಾರಿರುವುದಾಗಿ ಹೇಳಿದೆ. ಇತ್ತಂಡಗಳು ಭರ್ಜರಿ ತಯಾರಿ ಮಾಡಿಕೊಂಡಿರುವುದರಿಂದ ಮುಂಗಾರು ಅಧಿವೇಶನದಲ್ಲಿ ಕಾವೇರಿದ ಚರ್ಚೆ ನಡೆಯುವ ಸಾಧ್ಯತೆಯಿದೆ.
ಈ ಅಧಿವೇಶನ ಆಗಸ್ಟ್ 12ಕ್ಕೆ ಪೂರ್ಣಗೊಳ್ಳಲಿದೆ. ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಗೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳು ನಡೆಯಲಿವೆ. ಪಹಲ್ಗಾಮ್ ದಾಳಿ, ಆಪರೇಷನ್ ಸಿಂಧೂರ್, ಡೊನಾಲ್ಡ್ ಟ್ರಂಪ್, ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಹಲವು ವಿಚಾರಗಳ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಯಲಿದೆ. ಅಧಿವೇಶನ ಆರಂಭವಾಗುವ ಮುನ್ನ ಭಾನುವಾರ ಕರೆಯಲಾಗಿದ್ದ ಸರ್ವಪಕ್ಷ ಸಭೆಯಲ್ಲಿ, ಆಪರೇಷನ್ ಸಿಂದೂರ ಮತ್ತು ಟ್ರಂಪ್ ಹೇಳಿಕೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಉತ್ತರಿಸಬೇಕೆಂದು ವಿರೋಧ ಪಕ್ಷಗಳು ಸರ್ಕಾರವನ್ನು ಒತ್ತಾಯಿಸಿವೆ.
ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಂತರ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ನಿಯಮಗಳ ಪ್ರಕಾರ ಆಪರೇಷನ್ ಸಿಂದೂರ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧವಾಗಿದೆ ಎಂದು ಹೇಳಿದ್ದಾರೆ.
ಸಂಸತ್ತಿನ ಮಳೆಗಾಲದ ಅಧಿವೇಶನಕ್ಕೂ ಮುನ್ನ ನಡೆದ ಸರ್ವಪಕ್ಷ ಸಭೆಯಲ್ಲಿ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್, ಕೇಂದ್ರ ಸಚಿವ ಕಿರಣ್ ರಿಜಿಜು, ಕೇಂದ್ರ ಸಚಿವ ಜೆಪಿ ನಡ್ಡಾ ಮತ್ತು ಇತರ ಹಲವು ಪಕ್ಷಗಳ ನಾಯಕರು ಸೇರಿದಂತೆ 54 ಜನರು ಭಾಗವಹಿಸಿದ್ದರು. ಬಾಕಿ ಇರುವ 9 ಮಸೂದೆಗಳನ್ನು ಮಂಡಿಸುವ ಸಾಧ್ಯತೆ ಇದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಸಂಸತ್ತಿನ ಸುಗಮ ಕಾರ್ಯನಿರ್ವಹಣೆಗೆ ಸರ್ಕಾರ ವಿರೋಧ ಪಕ್ಷದ ಸಹಕಾರವನ್ನು ಕೋರಿದೆ.
























