ತನಿಖೆಗೆ ಎಸ್‌ಐಟಿ ರಚನೆ : ಧರ್ಮಸ್ಥಳದ ವಕ್ತಾರ ಸ್ವಾಗತ

ತನಿಖೆಯಿಂದ ಹಿಂದೆ ಸರಿಯಲಿದ್ದಾರಾ ಇಬ್ಬರು ಐಪಿಎಸ್‌ ಅಧಿಕಾರಿಗಳು?

ಧರ್ಮಸ್ಥಳ: ಧರ್ಮಸ್ಥಳದ ಅರಣ್ಯ ಪ್ರದೇಶದಲ್ಲಿ ನೂರಾರು ಶವಗಳನ್ನು ಹೂತಿರುವ ಆರೋಪದ ತನಿಖೆಗೆ ಎಸ್‌ಐಟಿ ರಚಿಸಿರುವುದನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ವಕ್ತಾರ ಕೆ.ಪಾರ್ಶ್ವನಾಥ್ ಜೈನ್ ಸ್ವಾಗತಿಸಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿದ ಅವರು, ಧರ್ಮಸ್ಥಳ ಗ್ರಾಮದ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ‘ಹಲವಾರು ಶವಗಳನ್ನು ಹೂತಿದ್ದೆ’ ಎಂಬ ದೂರು ಪ್ರಕರಣವು ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ತರ್ಕವಾತರ್ಕಗಳು, ಊಹಾಪೋಹಗಳು ಹಾಗೂ ಗೊಂದಲಗಳನ್ನು ಹುಟ್ಟುಹಾಕಿದೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಾಮಾಣಿಕವಾಗಿ ತನಿಖೆ ನಡೆಯಬೇಕೆಂಬ ನಮ್ಮ ಹಾಗೂ ಸಾರ್ವಜನಿಕರ ನಿರೀಕ್ಷೆಯ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ರಾಜ್ಯ ಸರ್ಕಾರ ಹಸ್ತಾಂತರಿಸಿದೆ ಎಂಬುದು ತಿಳಿದು ಬಂದಿದೆ. ಸರ್ಕಾರದ ಈ ನಿಲುವು ಉತ್ತಮವಾಗಿದೆ ಎಂದಿದ್ದಾರೆ.





















































 
 

ಸಮಾಜದ ನೈತಿಕತೆ ಹಾಗೂ ಶ್ರದ್ಧೆಗೆ ನಿಲುಕುವ ಬಲವಾದ ಆಧಾರವೆಂದರೆ ‘ಸತ್ಯ’. ಆದ್ದರಿಂದ ಈ ಪ್ರಕರಣದಲ್ಲಿ ಎಸ್‌ಐಟಿ ತನಿಖಾ ತಂಡ ಸತ್ಯಾಂಶವನ್ನು ಅತಿಶೀಘ್ರವಾಗಿ ಪ್ರಾಮಾಣಿಕ ತನಿಖೆ ನಡೆಸಿ ಸಾರ್ವಜನಿಕರ ಮುಂದೆ ಬಹಿರಂಗಪಡಿಸಬೇಕು ಎಂಬುದು ನಮ್ಮ ಆಶಯ ಎಂದು ತಿಳಿಸಿದ್ದಾರೆ.

ಧರ್ಮಸ್ಥಳ ಕುರಿತಾಗಿ ಕೇಳಿಬರುತ್ತಿರುವ ಆರೋಪಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಸರ್ಕಾರ ನಿನ್ನೆ ಹಿರಿಯ ಐಪಿಎಸ್ ಅಧಿಕಾರಿ ಪ್ರಣವ್ ಮೊಹಾಂತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿದೆ. ಆದರೆ ಈ ತಂಡದ ಇಬ್ಬರು ಸದಸ್ಯರು ತನಿಖೆಯಿಂದ ಹಿಂದೆಗೆಯಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ವಿಶೇಷ ತನಿಖಾ ತಂಡದ ನಾಲ್ವರಲ್ಲಿ ಇಬ್ಬರು ಐಪಿಎಸ್‌ ಅಧಿಕಾರಿಗಳು ಹಿಂದಕ್ಕೆ ಸರಿದಿದ್ದಾರೆ ಏಂಬ ಸುದ್ದಿ ಹರಿದಾಡುತ್ತಿದೆ. ತನಿಖೆಯಿಂದ ಹಿಂದೆ ಸರಿಯುವುದಕ್ಕೆ ಇಬ್ಬರು ಅಧಿಕಾರಿಗಳು ತಯಾರಿ ನಡೆಸಿದ್ದಾರೆ. ಐಪಿಎಸ್‌ ಅಧಿಕಾರಿಗಳಾದ ಎಂ.ಎನ್ ಅನುಚೇತ್ ಮತ್ತು ಸೌಮ್ಯಲತಾ ಸರ್ಕಾರಕ್ಕೆ ಪತ್ರ ಬರೆಯಲು ಮುಂದಾಗಿದ್ದಾರೆ. ವೈಯಕ್ತಿಕ ಕಾರಣಗಳನ್ನ ನೀಡಿ ಎಸ್‌ಐಟಿ ತಂಡದಿಂದ ತಮ್ಮನ್ನು ಕೈಬಿಡುವಂತೆ ಸೋಮವಾರ ಪತ್ರ ಬರೆಯಲು ಸಿದ್ಧತೆ ನಡೆಸಿದ್ದಾರೆ ಎಂದು ಉನ್ನತ ಪೊಲೀಸ್‌ ಮೂಲಗಳಿಂದ ತಿಳಿದುಬಂದಿದೆ.

ಕಳೆದ ಜೂನ್ 22ರಂದು ವಕೀರಾದ ಓಜಸ್ವಿ ಗೌಡ ಹಾಗೂ ಸಚಿನ್ ದೇಶಪಾಂಡೆ ಸಾಮಾಜಿಕ ಜಾಲತಾಣದಲ್ಲಿ ಪತ್ರವೊಂದನ್ನು ಹಂಚಿಕೊಳ್ಳುವ ಮೂಲಕ ಧರ್ಮಸ್ಥಳದ ಕುರಿತು ದೇಶಾದ್ಯಂತ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಅನಾಮಿಕ ವ್ಯಕ್ತಿಯೊಬ್ಬ ಯಾರದ್ದೊ ಒತ್ತಡಕ್ಕೆ ಹೆದರಿ ನೂರಾರು ಶವ ವಿಲೇವಾರಿ ಮಾಡಿದ್ದಾನೆ ಎನ್ನಲಾದ ಸುದ್ದಿಯು ತೀವ್ರ ಸಂಚಲನಕ್ಕೆ ಕಾರಣವಾಗಿದೆ. ಆತ ಬೆಳ್ತಂಗಡಿ ಪೊಲೀಸರಿಗೆ ಹೂತಿಟ್ಟಿದ್ದ ತಲೆ ಬುರುಡೆ ತಂದುಕೊಟ್ಟಿದ್ದಾನೆಂಬ ಸುದ್ದಿಯೂ ಹೊರಬಿತ್ತು. ಇದಾದ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡರು. ಇದನ್ನು ಇಷ್ಟಕ್ಕೆ ಬಿಡದ ಅನಾಮಿಕ ಜುಲೈ ಮೂರರಂದು ವಕೀಲರ ಸಹಾಯದೊಂದಿಗೆ ದಕ್ಷಿಣ ಕನ್ನಡ ಎಸ್ಪಿಗೆ ದೂರು ನೀಡಿದ್ದ. ಅದರಲ್ಲಿ ಭಯಾನಕ ಅಂಶಗಳನ್ನು ಉಲ್ಲೇಖಿಸಿದ್ದ.

1995ರಿಂದ 2014ರ ವರೆಗೆ ಧರ್ಮಸ್ಥಳದ ನೌಕರನಾಗಿದ್ದೆ. ನಾನು ಹಲವು ಶವಗಳನ್ನು ವಿಲೇವಾರಿ ಮಾಡಿದ್ದೇನೆ. ಹೂತಿಟ್ಟ ಶವಗಳಲ್ಲಿ ಮಹಿಳೆಯರದ್ದೇ ಹೆಚ್ಚು. ಇವೆಲ್ಲ ಅನಾಥ ಶವಗಳು ಅಂತ ನಾನು ಭಾವಿಸಿದ್ದೆ. ಆನಂತರ ನನಗೆ ಅನುಮಾನ ಬರಲು ಶುರುವಾಯ್ತು. ಕೆಲ ಮಹಿಳೆಯರ ಶವಗಳು ನಗ್ನ ಸ್ಥಿತಿಯಲ್ಲಿದ್ದವು. ಲೈಂಗಿಕ ಆಕ್ರಮಣ, ಹಿಂಸೆಯ ಕುರುಹುಗಳಿದ್ದವು. ನಾನು ಪೊಲೀಸರಿಗೆ ಹೇಳಲು ಮುಂದಾದಾಗ ನನ್ನ ಮೇಲೆ ಹಲ್ಲೆ ಮಾಡಿದರು. ಶವ ಹೂತಿಟ್ಟ ವಿಚಾರ ಬಯಲು ಮಾಡದಂತೆ ಬೆದರಿಸಿದರು. ನಿನ್ನನ್ನೂ ಹೂತು ಹಾಕುತ್ತೇನೆ ಅಂತ ಬೆದರಿಕೆ ಹಾಕಿದ್ದರು. ನಾನು ಜೀವ ಭಯದಿಂದ 11 ವರ್ಷಗಳ ಹಿಂದೆ ಧರ್ಮಸ್ಥಳ ತೊರೆದೆ. ಈಗ ನನಗೆ ಪಾಪಪ್ರಜ್ಞೆ ಕಾಡುತ್ತಿದೆ. ಕೊಲೆಪಾತಕರು, ಅತ್ಯಾಚಾರಿಗಳು ಯಾರೆಂದು ಗೊತ್ತಾಗಬೇಕು. ಹೂತು ಹಾಕಿರುವ ಸ್ಥಳವನ್ನು ತೋರಿಸಲು ನಾನು ಸಿದ್ಧ, ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿ. ಈ ರೀತಿ ಪೊಲೀಸರಿಗೆ ಶವ ವಿಲೇವಾರಿ ಮಾಡಿದ್ದ ಅನಾಮಿಕ ವ್ಯಕ್ತಿ ದೂರು ನೀಡಿದ್ದ. ಬೆಳ್ತಂಗಡಿ ನ್ಯಾಯಾಲಯದಲ್ಲೂ ಈ ಸಂಬಂಧ ಹೇಳಿಕೆ ದಾಖಲಿಸಿದ್ದ. ಮುಸುಕುಧಾರಿಯಾಗಿ ಬಂದು ನ್ಯಾಯಾಧೀಶರ ಮುಂದೆ ಪ್ರಕರಣದ ವಿವಿರ ನೀಡಿದ್ದ.

ನ್ಯಾಯಾಧೀಶರ ಮುಂದೆ ಬಿಎನ್‌ಎಸ್ ಸೆಕ್ಷನ್‌ 164 ಅಡಿ ಹೇಳಿಕೆ ದಾಖಲು ಮಾಡಿದ ನಂತ್ರ ಪ್ರಕರಣ ಇನ್ನಷ್ಟು ಕಾವೇರ ತೊಡಗಿತು. ಎಲ್ಲೆಡೆ ಶವ ಹೂತಿಟ್ಟ ವಿಚಾರವೇ ತೀವ್ರ ಚರ್ಚೆಗೆ ಗ್ರಾಸವಾಯ್ತು. ಕೆಲ ಹಿರಿಯ ವಕೀಲರು ಹಾಗೂ ನಿವೃತ್ತ ನ್ಯಾಯಾಧೀಶರು ಕೂಡ ಸಮಗ್ರ ತನಿಖೆಗೆ ಒತ್ತಾಯಿಸಿದ್ದರು. ಕೆಲವರು ಮುಖ್ಯಮಂತ್ರಿಗಳನ್ನ ಖುದ್ದು ಭೇಟಿ ಮಾಡಿ ಆಗ್ರಹಿಸಿದ್ದರು. ಅದರಂತೆ ಸರ್ಕಾರ ಎಸ್‌ಐಟಿ ರಚಿಸಿದೆ.

error: Content is protected !!
Scroll to Top